ಮಳವಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜೆಡಿಎಸ್ ಬೆಂಬಲಿಸಿ

4 mlv 1
ಮಳವಳ್ಳಿ ತಾಲೂಕಿನ ಹಂಗ್ರಾಪುರ ಗ್ರಾಮದಲ್ಲಿ ಗುರುವಾರ ಸಂಜೆ ಜೆಡಿಎಸ್ ಅಭ್ಯರ್ಥಿ ಶಾಸಕ ಡಾ.ಕೆ.ಅನ್ನದಾನಿ ಪರವಾಗಿ ಕುರುಬ ಸಮುದಾಯದ ಮುಖಂಡ ಮಂಜುಸ್ವಾಮಿ ಮತಯಾಚಿಸಿದರು. ಶಾಸಕ ಡಾ.ಕೆ.ಅನ್ನದಾನಿ, ಸುಹಾಸ್ ಪ್ರಭು, ಬಿ.ಪಿ.ಪುಟ್ಟಬುದ್ದಿ, ಮಲ್ಲೇಗೌಡ, ಶಂಕರ್ ಇದ್ದರು.
Published on

ಮಳವಳ್ಳಿ: ಪಟ್ಟಣದಲ್ಲಿ ನಾಲ್ಕು ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಸರ್ಕಾರಿ ನಿವೇಶನ ನೀಡುವುದರ ಜತೆಗೆ ವಿಶೇಷ ಅನುದಾನ ಕೊಟ್ಟು ಭಕ್ತ ಕನಕದಾಸರ ಭವನ ನಿರ್ಮಿಸಿ ತಾಲೂಕಿನ ಹಾಲುಮತ ಸಮುದಾಯಕ್ಕೆ ಗೌರವ ಹೆಚ್ಚಿಸಿರುವ ಶಾಸಕ ಡಾ.ಕೆ.ಅನ್ನದಾನಿ ಅವರನ್ನು ಸಮಾಜದವರು ಎಂದಿಗೂ ಮರೆಯಬಾರದು ಎಂದು ಕುರುಬ ಸಮುದಾಯದ ಮುಖಂಡ, ಉದ್ಯಮಿ ಮಂಜುಸ್ವಾಮಿ ಹಂಗ್ರಾಪುರ ತಿಳಿಸಿದರು.

ತಾಲೂಕಿನ ಹಂಗ್ರಾಪುರ ಗ್ರಾಮದಲ್ಲಿ ಗುರುವಾರ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಅನ್ನದಾನಿ ಪರ ಮತಯಾಚಿಸಿ ಮಾತನಾಡಿದ ಅವರು, ಡಾ.ಕೆ.ಅನ್ನದಾನಿ ಶಾಸಕರಾದ ನಂತರದ ದಿನಗಳಲ್ಲಿ ಎದುರಾದ ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಕ್ಷೇತ್ರದಲ್ಲಿದ್ದುಕೊಂಡು ಸೋಂಕಿತರಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುವುದರ ಜತೆಗೆ ಸಂಕಷ್ಟದಲ್ಲಿದ್ದವರಿಗೆ ಎಲ್ಲ ರೀತಿಯಲ್ಲೂ ಸ್ಪಂದಿಸಿದ್ದರು. ದೊರೆತ ಅಲ್ಪಾವಧಿಯಲ್ಲೇ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು.
ಜಾತಿ ವ್ಯವಸ್ಥೆಯಡಿ ಆಯಾಯ ಸಮುದಾಯಗಳಿಗೆ ಗೌರವ ತಂದುಕೊಡುವ ಕಾರ್ಯ ಕೈಗೊಂಡಿದ್ದಾರೆ. ಇದರ ಪೂರಕವಾಗಿ ಪಟ್ಟಣದಲ್ಲಿ ಕನಕ ಭವನ, ಬಸವ ಭವನ, ವಾಲ್ಮೀಕಿ, ಸವಿತಾ ಸಮಾಜ ಸೇರಿದಂತೆ ಹಲವಾರು ಕೆಳ ಸಮುದಾಯದವರಿಗೂ ಭವನಗಳ ನಿರ್ಮಾಣಕ್ಕೆ ಕ್ರಮ ವಹಿಸಿ ಸಮಾನತೆ ಕಾಯ್ದುಕೊಂಡಿದ್ದಾರೆ ಎಂದರು.

ಜೆಡಿಎಸ್ ಪಕ್ಷ ಪಂಚರತ್ನ ಯೋಜನೆ ಮೂಲಕ ಮಧ್ಯವ ವರ್ಗದ ಜನರ ಬದುಕು ಸದೃಢಗೊಳಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಯೋಜನೆ ರೂಪಿಸಿದೆ. ಆದ್ದರಿಂದ ಯಾವುದೇ ಆಮಿಷಗಳಿಗೆ ಒಳಗಾಗದೆ ಎಲ್ಲ ವರ್ಗದ ಮತದಾರರು ಜೆಡಿಎಸ್ ಬೆಂಬಲಿಸುವಂತೆ ಕೋರಿದ ಅವರು, ಮಳವಳ್ಳಿ ಕ್ಷೇತ್ರದಲ್ಲಿ ಡಾ.ಕೆ.ಅನ್ನದಾನಿ ಅವರನ್ನು ಗೆಲ್ಲಿಸುವುದರಿಂದ ಮುಂಬರುವ ಸರ್ಕಾರದಲ್ಲಿ ಸಚಿವರಾಗುವುದು ನಿಶ್ಚಿತ. ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಅತ್ಯಧಿಕ ಮತ ನೀಡಿ ವಿಧಾನಸಭೆಗೆ ಕಳುಹಿಸಬೇಕು ಎಂದು ಕೋರಿದರು.

ಶಾಸಕ ಡಾ.ಕೆಅನ್ನದಾನಿ ಮಾತನಾಡಿ, ಶಾಸಕನಾದ ನಂತರ ದಿನಗಳಲ್ಲಿ ಕರೊನಾ ಮಹಾಮಾರಿ ನನ್ನ ಬಹುಪಾಲು ಅವಧಿಯನ್ನು ಕಸಿದುಕೊಂಡಿತು. ಕೋವಿಡ್ ಸಂಕಷ್ಟದ ದಿನಗಳಲ್ಲಿ ಜನ ಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡಿದ್ದೇನೆ. ಸಿಕ್ಕ ಕಡಿಮೆ ಅವಧಿಯಲ್ಲೇ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಸಮರ್ಪಕವಾಗಿ ನಿಮ್ಮ ಸೇವೆ ಮಾಡಲು ಮತ್ತಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದು, ಮತ್ತೊಮ್ಮೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಮುಖಂಡರಾದ ಸುಹಾಸ್ ಪ್ರಭು, ಬಿ.ಪಿ.ಪುಟ್ಟಬುದ್ದಿ, ಲಿಂಗೇಗೌಡ, ಮಾಜಿ ಚೇರ‌್ಮನ್ ಬಸವಣ್ಣ, ಎಚ್.ಬಿ.ಶಿವಶಂಕರ್, ಗುರುಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net