ಮಳಲಿ ಗ್ರಾಮದಲ್ಲಿ ನಂದಿಕಲ್ಲು ಶಾಸನ ಪತ್ತೆ

24hos1p nandikallu
Published on

ಹೊಸನಗರ: ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಮಳಲಿ ಗ್ರಾಮದಲ್ಲಿ ವಿಜಯನಗರ ಅರಸರ ಕೊನೆ ಕಾಲದ ನಂದಿಕಲ್ಲು ಶಾಸನ ಪತ್ತೆಯಾಗಿದೆ. ಇತ್ತೀಚೆಗೆ ಮಳಲಿ ಗ್ರಾಮದಲ್ಲಿ ನರೇಗಾ ಕಾಮಗಾರಿ ವೇಳೆ ಪುರಾತನ ಸಿದ್ದಮಕ್ಕಿ ಕೆರೆ ಪತ್ತೆಯಾದ ಕೆರೆಯ ಅರ್ಧ ಕಿಮೀ ಅಂತರದಲ್ಲಿ ನಂದಿಕಲ್ಲು ಶಾಸನ ಪತ್ತೆಯಾಗಿರುವುದು ಕುತೂಹಲಕ್ಕೆ ಎಡೆಮಾಡಿದೆ.

190 ಸೆಂ ಮೀ ಉದ್ದವಿರುವ ನಂದಿಕಲ್ಲು ಶಾಸನದ ಮೇಲ್ಭಾಗದಲ್ಲಿರುವ ನಂದಿ ವಿಗ್ರಹ ತುಂಡಾಗಿದೆ. ನಿಲುವುಗಂಬದಂತೆ ಕಾಣುವ ಇದು ಪಶ್ಚಿಮಾಭಿಮುಖವಾಗಿದೆ. ಕಲ್ಲಿನ ಮೇಲೆ ನಾಲ್ಕು ಅಕ್ಷರ ಎರಡು ಸಾಲಿನ ಹಳೇಗನ್ನಡದ ಪಠ್ಯವಿದೆ. ಈ ಪಠ್ಯವನ್ನು ಓದಿರುವ ಲಿಪಿತಜ್ಞ ಜಗದೀಶ್, ಹೊಸರೈದ ಎಂಬ ಪಠ್ಯ ಎಂದು ಗುರುತಿಸಿದ್ದಾರೆ.

ಹೊಸರೈದ ಎಂದರೆ ಹೊಸ ಐಶ್ವರ್ಯ ಕೊಡುವವನು, ಫಲವತ್ತತೆ ಹಾಗೂ ಉತ್ಪನ್ನದ ಸಂಕೇತವಾಗಿದೆ. ದಾನ ಕೊಟ್ಟಿರುವುದು ಅಂದರೆ ಸಿದ್ದಮಕ್ಕಿಯ ಕೆರೆ ಹತ್ತಿರದ ಭೂಮಿಯನ್ನು ಉಳುಮೆಗಾಗಿ ಹೊಸದಾಗಿ ದಾನಮಾಡಿ ಈ ನಂದಿಕಲ್ಲು ಶಾಸನ ನಿಲ್ಲಿಸಿರುವುದು ಎನ್ನಲಾಗಿದೆ. ಶಾಸನ ಲಿಪಿಯ ಲಕ್ಷಣದ ಆಧಾರದ ಮೇಲೆ ಇದು ಕ್ರಿಶ 16-17ನೇ ಶತಮಾನದಾಗಿದ್ದು, ವಿಜಯನಗರ ಅರಸರ ಕೊನೆ ಕಾಲ ಎನ್ನಬಹುದು ಎಂದು ಜಿಲ್ಲಾ ಪುರಾತತ್ವ ಅಧಿಕಾರಿ ಆರ್.ಶೇಜೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ಪತ್ರಿಕೆಯಲ್ಲಿ ಮೇ 20ರಂದು ‘ನರೇಗಾ ಕಾಮಗಾರಿ ವೇಳೆ ಮಳಲಿಗ್ರಾಮದಲ್ಲಿ ಪುರಾತನ ಕೆರೆ ಪತ್ತೆ’ ಎಂಬ ಶೀರ್ಷಿಕಯಡಿ ಪ್ರಕಟಗೊಂಡ ಸುದ್ದಿ ನೋಡಿ ಪರಿಶೀಲಿಸಲು ಹೋದಾಗ ಅನತಿ ದೂರದಲ್ಲಿರುವ ನಂದಿಕಲ್ಲು ಶಾಸನ ಪತ್ತೆಯಾಗಿದ್ದು ಪರಿಶೀಲಿಸಲಾಯಿತು. ಬಳಿಕ ಲಿಪಿತಜ್ಞರ ಮೂಲಕ ಶಾಸನದಲ್ಲಿರುವ ಪಾಠವನ್ನು ಓದಲಾಗಿದ್ದು ಶಾಸನದ ಮಹತ್ವ ಮತ್ತು ಕಾಲವನ್ನು ಅರಿಯಲಾಯಿತು ಎಂದು ತಿಳಿಸಿದ್ದಾರೆ.

ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಿ.ಸಿ.ಪೂರ್ಣಿಮಾ, ಕರಿಮನೆ ಗ್ರಾಪಂ ಅಧ್ಯಕ್ಷ ರಮೇಶ್ ಹಲಸಿನಹಳ್ಳಿ, ಉಪಾಧ್ಯಕ್ಷೆ ಮಾಲತಿ, ಸದಸ್ಯರಾದ ಸತೀಶ್ ಪಟೇಲ್, ಗ್ರಾಮದ ಸಿದ್ದಮಕ್ಕಿ ಪ್ರಕಾಶ್, ಪಾಂಡು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net