

ಚನ್ನರಾಯಪಟ್ಟಣ : ತಾಲೂಕಿನ ಸಬ್ಬನಹಳ್ಳಿ ಗ್ರಾಮದಲ್ಲಿ ಮರು ನಿರ್ಮಾಣಗೊಂಡಿರುವ ಶ್ರೀ ಮಲ್ಲೇಶ್ವರಸ್ವಾಮಿ ದೇಗುಲದ ಲೋಕಾರ್ಪಣೆ ಕಾರ್ಯ ಮಂಗಳವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ಗ್ರಾಮದೇವತೆ ಉಡಸಲಮ್ಮ ದೇವಿಯ ಅಡ್ಡಪಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾಧ್ಯದೊಂದಿಗೆ ಜರುಗಿತು. ಭಕ್ತರು ಈಡುಗಾಯಿ ಹಾಕಿ ವಿಶೇಷ ಪೂಜೆ ಸಲ್ಲಿಸಿದರು.
ಸಪ್ತಮಿ ಪ್ರಾತ ಕಾಲದಲ್ಲಿ ಶಿವಲಿಂಗ ಸೇರಿದಂತೆ ದೇವತಾಮೂರ್ತಿಗಳ ಪ್ರತಿಷ್ಠಾಪನೆ, ಪ್ರಾಣ ಪ್ರತಿಷ್ಠಾ, ಕಲಾಹೋಮ ನಡೆಸಲಾಯಿತು. ಶಿಖರ ಕಳಸ ಸ್ಥಾಪನೆ ಮಾಡಿ, ಕುಂಬಾಭಿಷೇಕ ನೆರವೇರಿತು. ವಿಶೇಷ ಪೂಜೆ ಹಾಗೂ ಹೋಮ-ಹವನಗಳು ನೆರವೇರಿದವು. ತಮಿಳುನಾಡಿನ ಊಟಿಯಲ್ಲಿ ವಾಸ ಇರುವ ದೇವರ ಒಕ್ಕಲಿನವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನಡೆಸಿಕೊಟ್ಟರು. ಮಹಾಮಂಗಳಾರತಿ ಬೆಳಗಿಸಿದ ಬಳಿಕ ಅನ್ನದಾಸಾಓಹ ನಡೆಯಿತು.
ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಹಾಗೂ ವಿವಿಧ ಜನಪ್ರತಿನಿಧಿಗಳು, ಸಬ್ಬನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗಹೊಂಡಿದ್ದರು.