ಮಲ್ಲೇಶನಪಾಳ್ಯಅಭಿವೃದ್ಧಿಗೆ ನಿರ್ಲಕ್ಷ್ಯ ಏಕೆ?

2 Budikote 1
Published on

ಬೂದಿಕೋಟೆ: ಬಂಗಾರಪೇಟೆ ತಾಲೂಕಿನ ಆಂಧ್ರ ಹಾಗೂ ತಮಿಳುನಾಡು ಗಡಿಭಾಗಕ್ಕೆ ಹೊಂದಿಕೊಂಡಿರುವ ಹಾಗೂ ಕಾಡಂಚಿನಲ್ಲಿರುವ ಮಲ್ಲೇಶನಪಾಳ್ಯ ಗ್ರಾಮ ಆಧುನಿಕ ಕಾಲದಲ್ಲೂ ರಸ್ತೆ, ಸಾರಿಗೆ, ವೈದ್ಯಕೀಯ ವ್ಯವಸ್ಥೆ ಸೇರಿ ಹಲವು ಮೂಲಸೌಕರ್ಯಗಳಿಂದ ವಂಚಿತವಾಗಿ ಅಭಿವೃದ್ಧಿ ಕಾಣದ ಕುಗ್ರಾಮವಾಗೇ ಉಳಿದಿದೆ.

ಮಲ್ಲೇಶನಪಾಳ್ಯದಲ್ಲಿ 250 ಜನಸಂಖ್ಯೆ ಇದ್ದು, 29 ಮನೆಗಳು, 90 ಮಂದಿ ಮತದಾರರಿದ್ದಾರೆ. ಗ್ರಾಮದ ಸುತ್ತ ಅರಣ್ಯ ಪ್ರದೇಶವಿರುವ ಕಾರಣ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಇತ್ತೀಚೆಗೆ ಗ್ರಾಮದ ರೈತನೊಬ್ಬನನ್ನು ಕಾಡಾನೆ ಬಲಿ ತೆಗೆದುಕೊಂಡಿದೆ.

ಸರಿಯಾದ ರಸ್ತೆಯಿಲ್ಲ: ಗ್ರಾಮಕ್ಕೆ ಸರಿಯಾದ ರಸ್ತೆ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲ. ಮಣ್ಣಿನ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕು. ಪ್ರತಿ ತಿಂಗಳು ಪಡಿತರ ಪಡೆಯಲು 6 ಕಿಮೀ ದೂರದ ಭತ್ಲಹಳ್ಳಿಗೆ ನಡೆದೇ ಹೋಗಬೇಕು.

ಗ್ರಾಮದಲ್ಲಿ ಶಾಲೆಯಿಲ್ಲ: ಗ್ರಾಮದಲ್ಲಿ ಅಂಗನವಾಡಿ ಇಲ್ಲ. ಸರ್ಕಾರಿ ಪ್ರಾಥಮಿಕ ಶಾಲೆಯಿದ್ದು, ಕರೊನಾ ಆರಂಭಕ್ಕೂ ಮುಂಚೆಯೇ ಗ್ರಾಮಕ್ಕೆ ಶಿಕ್ಷಕರು ಬರದ ಕಾರಣ ಶಾಲೆಗೆ ಬಿಗ ಜಡಿಯಲಾಗಿದೆ. 1ರಿಂದ 8ರವರೆಗೆ ತಳೂರಿಗೆ ಮತ್ತು 9ರಿಂದ 10ನೇ ತರಗತಿಗಾಗಿ ದೋಣಿಮಡಗು ಗ್ರಾಮಕ್ಕೆ ಕಾಡಿನ ದಾರಿಯಲ್ಲಿ ನಡೆದೇ ಹೋಗಬೇಕು. ಇದರಿಂದ ಬಹಳಷ್ಟು ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ.

40 ಕಿಮೀ ಪ್ರಯಾಣ: ಆರೋಗ್ಯದ ಸಮಸ್ಯೆ ಉಂಟಾದರೆ ಸುಮಾರು 40 ಕಿಮೀ ದೂರದ ಬಂಗಾರಪೇಟೆಗೆ ಹೋಗಬೇಕು. ಗ್ರಾಮಸ್ಥರ ಆರೋಗ್ಯ ವಿಚಾರಿಸಲು ಆರೋಗ್ಯ ಸಿಬ್ಬಂದಿ ಇತ್ತ ತಲೆ ಹಾಕುತ್ತಿಲ್ಲ. ಸರ್ಕಾರ ಗ್ರಾಮಕ್ಕೆ ಆಶಾ ಕಾರ್ಯಕರ್ತೆಯನ್ನು ನೇಮಿಸಿದ್ದರೂ ಗ್ರಾಮಕ್ಕೆ ಭೇಟಿ ಕೊಡುತ್ತಿಲ್ಲ ಅನ್ನುವುದು ಗ್ರಾಮಸ್ಥರ ಅಳಲು.

ಸೂರು ಕಲ್ಪಿಸದ ಗ್ರಾಪಂ: ಚರಂಡಿ ವ್ಯವಸ್ಥೆ, ಸ್ವಚ್ಛತೆ ಇಲ್ಲದೆ ಎಲ್ಲೆಡೆ ಗಬ್ಬುನಾಥ ಬೀರುತ್ತಿದೆ. ಮಳೆ ಬಂದರೆ ನೀರೆಲ್ಲಾ ಮನೆಗಳಿಗೆ ನುಗ್ಗುತ್ತದೆ. ಜನಪ್ರತಿನಿಧಿಗಳಾಗಲಿ, ಪಂಚಾಯಿತಿ ಅಧಿಕಾರಿಗಳಾಗಲೀ ಇತ್ತ ಸುಳಿಯುತ್ತಿಲ್ಲ. ಗ್ರಾಮದಲ್ಲಿ ಕೆಲ ಮನೆಗಳು ಬೀಳುವ ಹಂತದಲ್ಲಿದ್ದು, ಮನೆಗಾಗಿ ಪಂಚಾಯಿತಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಹಲವು ಕುಟುಂಬಗಳಿಗೆ ಇನ್ನೂ ಪಡಿತರ ಕಾರ್ಡ್ ವಿತರಣೆಯಾಗಿಲ್ಲ ಎಂಬುದು ಗ್ರಾಮಸ್ಥರ ದೂರು.

ಗ್ರಾಮವು ಕಾಡಂಚಿನಲ್ಲಿದ್ದು, ಮೂಲಸೌಲಭ್ಯವಿಲ್ಲದೆ ಹಿಂದುಳಿದಿರುವ ಕಾರಣ ಗ್ರಾಮದ ಯುವಕರಿಗೆ ಹೆಣ್ಣು ಕೊಡಲಿಕ್ಕೆ ಯಾರೂ ಮುಂದಾಗುತ್ತಿಲ್ಲ. ಮಕ್ಕಳು ಶಾಲೆಗೆ ದೋಣಿಮಡಗುವರೆಗೂ ನಡದೇ ಹೋಗಬೇಕು. ಪಡಿತರ ತರಲು ಹೋಗುತ್ತಿದ್ದಾಗ ಆನೆಗಳ ಹಿಂಡು ಅಡ್ಡ ಬಂದು ತಪ್ಪಿಸಿಕೊಂಡು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದೇವೆ. ಮತ ಪಡೆದು ಹೋಗುವ ಜನಪ್ರತಿನಿಧಿಗಳು 5 ವರ್ಷ ಇತ್ತ ಮುಖ ಮಾಡುತ್ತಿಲ್ಲ. ಸರಸ್ವತಿ, ಗ್ರಾಮಸ್ಥೆ, ಮಲ್ಲೇಶನಪಾಳ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಡಿನಲ್ಲಿ ಹಾದು ಹೋಗುವ ಕಾರಣ ರಸ್ತೆ ಅಭಿವೃದ್ದಿಗೆ ಅರಣ್ಯ ಇಲಾಖೆಯವರು ಸಹಕಾರ ನೀಡುತ್ತಿಲ್ಲ. ಗ್ರಾಮದಲ್ಲಿ ಅಂಗನವಾಡಿ ತೆರೆಯಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಗ್ರಾಮದಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸಲು 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, ಶಾಲೆಗೆ ಸಂಬಂಧಿಸಿದಂತೆ ಯಾವುದೇ ದೂರು ಬರದ ಕಾರಣ ಮಾಹಿತಿ ಪಡೆದು ಸಮಸ್ಯೆ ಬಗೆ ಹರಿಸುತ್ತೇನೆ. ಎಸ್.ಎನ್.ನಾರಾಯಣಸ್ವಾಮಿ, ಶಾಸಕ, ಬಂಗಾರಪೇಟೆ ಸರ್ಕಾರದಿಂದ ಮನೆಗಳು ಬಿಡುಗಡೆ ಮಾಡಿದ ಕೂಡಲೇ ಗ್ರಾಮದ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲಾಗುತ್ತದೆ. ಗ್ರಾಮದಲ್ಲಿ ಚರಂಡಿ ಹಾಗೂ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಮಂಜುಳಾ ಮಹದೇವ್, ಗ್ರಾಪಂ ಅಧ್ಯಕ್ಷೆ, ದೋಣಿಮಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net