ಮಲ್ಲಿಪಟ್ಟಣದಲ್ಲಿ ಶ್ರೀ ಉಳುಮೇಶ್ವರಸ್ವಾಮಿ ರಥೋತ್ಸವ

5ark3
Published on

ಅರಕಲಗೂಡು: ಶತಮಾನಗಳ ಇತಿಹಾಸವಿರುವ ತಾಲೂಕಿನ ಮಲ್ಲಿಪಟ್ಟಣ ಗ್ರಾಮದ ಶ್ರೀ ಉಳುಮೇಶ್ವರಸ್ವಾಮಿ ರಥೋತ್ಸವ ಭಾನುವಾರ ಸಡಗರ ಸಂಭ್ರಮದಿಂದ ಜರುಗಿತು.

ರಥೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಹಲವಾರು ಪೂಜಾ ವಿಧಾನಗಳು ವಿಧಿವತ್ತಾಗಿ ನಡೆದವು. ಬೆಳಗ್ಗೆ ದೇವರ ಮೂಲ ವಿಗ್ರಹಕ್ಕೆ ಅಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ಶುಭ ಮುಹೂರ್ತದಲ್ಲಿ ಮಧ್ಯಾಹ್ನ ದೇವರ ಉತ್ಸವ ಮೂರ್ತಿಯನ್ನು ಹೊರತಂದು ಪ್ರದಕ್ಷಿಣೆ ಹಾಕಿಸಿ ಅಲಂಕೃತ ಭವ್ಯ ರಥದ ಮೇಲೆ ರಥಾರೋಹಣ ಮಾಡಿ ಪೂಜೆ ಸಲ್ಲಿಸಲಾಯಿತು. ರಥಕ್ಕೆ ಭಕ್ತರು ಪೂಜೆ ಸಲ್ಲಿಸಿದರು. ಬಳಿಕ ನೆರೆದಿದ್ದ ಭಕ್ತರ ಜಯಘೋಷಗಳ ನಡುವೆ ತೇರು ಎಳೆಯಲಾಯಿತು.

ರಥ ಬೀದಿಯಲ್ಲಿ ತೇರು ಮುಂದೆ ಚಲಿಸುವಾಗ ಭಕ್ತರು ಗೋವಿಂದನ ನಾಮಸ್ಮರಣೆ ಮಾಡಿ ಭಕ್ತಿ ಭಾವ ಪ್ರದರ್ಶಿಸಿದರು. ಭಕ್ತರು ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ದೇವಸ್ಥಾನದಲ್ಲಿ ನಡೆದ ಪೂಜಾ ಕಾರ್ಯದಲ್ಲಿ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಪುನೀತರಾದರು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

ಗ್ರಾಪಂ ಅಧ್ಯಕ್ಷ ಎಂ.ಆರ್.ರಂಗಸ್ವಾಮಿ, ಉಪಾಧ್ಯಕ್ಷ ನಾಗರಾಜು, ಕಾಂಗ್ರೆಸ್ ಮುಖಂಡರಾದ ಎಚ್.ಪಿ. ಶ್ರೀಧರ್‌ಗೌಡ, ಎಂ.ಟಿ. ಕೃಷ್ಣೇಗೌಡ ಇತರರು ತೇರು ಎಳೆದು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net