

ಯಳಂದೂರು: ತಾಲೂಕಿನ ಮಲ್ಲಿಗಹಳ್ಳಿ, ಬಸವಪುರ, ಬೂದಿತಿಟ್ಟು , ಪಟ್ಟಣದ ಬಳೇಪೇಟೆ ಇನ್ನಿತರ ಗ್ರಾಮ/ಪ್ರದೇಶಗಳಿಗೆ ಕುಲಶಾಸ್ತ್ರ ಅಧ್ಯಯನ ತಂಡ ಶುಕ್ರವಾರ ಭೇಟಿ ನೀಡಿ ಉಪ್ಪಾರ ಸಮುದಾಯದ ಸ್ಥಿತಿಗತಿಗಳ ಅಧ್ಯಯನ ನಡೆಸಿತು.
ತಂಡದ ಜಿಲ್ಲಾ ಉಸ್ತುವಾರಿ ಹಾಗೂ ಜಿ.ಪಂ.ಮಾಜಿ ಅಧ್ಯಕ್ಷ ಮಹದೇವಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಉಪ್ಪಾರ ಸಮುದಾಯ 40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಇವರನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಹಲವು ವರ್ಷಗಳ ಬೇಡಿಕೆಯಾಗಿತ್ತು.
ಈ ಬೇಡಿಕೆಯನ್ನು ಮನಗಂಡ ಈ ಹಿಂದಿನ ಸರ್ಕಾರ ಕುಲಶಾಸ್ತ್ರ ಅಧ್ಯಯನ ಮಾಡಿ ಜನಾಂಗದ ಸ್ಥಿತಿಗತಿಯನ್ನು ವರದಿ ಮಾಡುವ ನಿಟ್ಟಿನಲ್ಲಿ ಪ್ರೊ.ಮೇತ್ರಿ ಅವರು, ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಯ ವತಿಯಿಂದ 6 ಜನರ ತಂಡ ರಚಿಸಿ ಗ್ರಾಮಗಳಲ್ಲಿ ಉಪ್ಪಾರ ಸಮುದಾಯದ ಸ್ಥಿತಿಗತಿಗಳ ಅಧ್ಯಯನ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ 225 ತಾಲೂಕಿನ ಆಯ್ದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿ.ಪಂ.ಉಪಾಧ್ಯಕ್ಷ ಜೆ.ಯೋಗೇಶ್, ಉಪ್ಪಾರ ಮುಖಂಡರಾದ ವೈ.ಕೆ.ಮೋಳೆ ರಾಜು, ಯರಿಯೂರು ದೊಡ್ಡ ರಾಜು, ಮರಿಸ್ವಾಮಿ, ನಾಗರಾಜು, ವಿಜಯ ಉಪ್ಪಾರ ಸೇರಿದಂತೆ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.