ಮಲ್ಲಿಕಾರ್ಜುನ್‌ಗೆ ಸಿಗಲಿ ಸಿಎಂ ಪದವಿ - ಕೇದಾರ ಜಗದ್ಗುರುಗಳ ಆಶಯ -ಎಸ್ಸೆಸ್ಸೆಂ ನಿವಾಸದಲ್ಲಿ ಇಷ್ಟಲಿಂಗ ಮಹಾಪೂಜೆ

dvg-kedara-sri-sep-24.jpg
Published on

ದಾವಣಗೆರೆ: ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಅರ್ಹತೆ ಇದ್ದರೂ ಕಾರಣಾಂತರಗಳಿಂದ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಈ ಯೋಗ ಮುಂದಿನ ದಿನಗಳಲ್ಲಿ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಸಿಗಲಿ ಎಂದು ಶ್ರೀ ಹಿಮವತ್ಕೇದಾರ್ ವೈರಾಗ್ಯ ಪೀಠದ ಜಗದ್ಗುರು ಭೀಮಾಶಂಕರಲಿಂಗ ಭಗವತ್ಪಾದರು ಆಶೀರ್ವದಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಗೀತಯುಕ್ತ ಇಷ್ಟಲಿಂಗ ಪೂಜೆ ನೆರವೇರಿಸಿ ಮಾತನಾಡಿದರು.

ಎಸ್ಸೆಸ್ ಅಥವಾ ಮಲ್ಲಿಕಾರ್ಜುನ್ ಅವರಾಗಲೀ ಈ ಭಾಗದಲ್ಲಿ ರಾಜಕೀಯ ಕ್ಷೇತ್ರಕ್ಕೆ ಸೀಮಿತರಾಗಿಲ್ಲ. ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ದೆಹಲಿಗೂ ವಿಸ್ತರಿಸಲಿ ಎಂದು ಆಶಿಸಿದರು.

ಕೇದಾರ ದೇವಸ್ಥಾನದ ಪೂಜಾ ಕೈಂಕರ್ಯ ಮತ್ತು ಉಸ್ತುವಾರಿ ಕುರಿತಂತೆ ಪ್ರಸ್ತಾಪಿಸಿದ ಶ್ರೀಗಳು, ಏನೇ ಆದರೂ ಪೀಠದ ಪರಂಪರೆ ಪಾಲನೆಗೆ ನಾವು ಎಂಥಹ ತ್ಯಾಗಕ್ಕೂ ಸಿದ್ಧ. ದೇಶಕ್ಕೆ ಸಂವಿಧಾನ ಇರುವಂತೆಯೇ ನಮ್ಮ ಪರಂಪರೆಗೂ ಸಂವಿಧಾನ ಇದ್ದು, ಅದರಂತೆ ನಡೆದುಕೊಳ್ಳುತ್ತೇವೆ ಎಂದರು.

ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಕೇದಾರ ಜಗದ್ಗುರು ಮಾತ್ರವಲ್ಲ, ಕೇದಾರನಾಥ ದರ್ಶನವನ್ನೇ ಮಲ್ಲಿಕಾರ್ಜುನ್ ಅವರು ಮಾಡಿಸಿದ್ದಾರೆ ಎಂದು ಶ್ಲಾಘಿಸಿದರು. ಶಿವಯೋಗಿ ಕಂಬಾಳಿಮಠ ಕಾರ್ಯಕ್ರಮ ನಿರೂಪಿಸಿದರು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಅವರ ಕುಟುಂಬ ಸದಸ್ಯರಿದ್ದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net