

ಚಿತ್ರದುರ್ಗ: ಮುರುಘಾಮಠದ 26 ನೇ ಪೀಠಾಧಿಪತಿ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ 30 ನೇ ಸ್ಮರಣೋತ್ಸವ ಹಾಗೂ ‘ಚಿನ್ಮೂಲಾದ್ರಿ ಚಿತ್ಕಳೆ’ ಸ್ಮರಣೋತ್ಸವ ಸಂಪುಟ ಬಿಡುಗಡೆ ಸಮಾರಂಭ ಹೊಳಲ್ಕೆರೆ ಒಂಟಿಕಂಬದ ಮುರುಘಾ ಮಠದಲ್ಲಿ ಆ.8ರ ಬೆಳಗ್ಗೆ 10.30ಕ್ಕೆ ನಡೆಯಲಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಸಾಹಿತಿಗಳು, ವಿದ್ವಾಂಸರು ಮತ್ತಿತರರ ಹಿರಿಯರ ಲೇಖನಗಳಿರುವ ಬೃಹತ್ ಸಂಪುಟ ಬಿಡುಗಡೆಯಾಗಲಿದೆ. ಪೀಠದ ಶ್ರೀ ಜಯದೇವ ಶ್ರೀಗಳು ದಾಸೋಹ ಆರಂಭಿಸಿದರೆ, ಮಲ್ಲಿಕಾರ್ಜುನ ಶ್ರೀಗಳು ಜ್ಞಾನದ ಹಸಿವು ತಣಿಸುವ ಕಾರ‌್ಯಕ್ಕೆ ಚಾಲನೆ ನೀಡಿದರು ಎಂದರು.
ಮಲ್ಲಿಕಾರ್ಜುನ ಶ್ರೀಗಳ ಆಡುವ ಹಾಗೂ ವೇದಿಕೆ ಮಾತುಗಳು ಒಂದೇ ಆಗಿದ್ದು, ಹಿರಿದಾದ ಅವರ ವ್ಯಕ್ತಿತ್ವಕ್ಕೆ ಅಲಂಕಾರಿಕವಾಗಿದ್ದ ವಿದ್ವತ್‌ಅನ್ನು ಕೆಲವರು ಅಹಂಕಾರವೆಂದೇ ಭಾವಿಸಿದ್ದರು. ಶ್ರೀಗಳ ಬದುಕು ಅತ್ಯಂತ ಸರಳವಾಗಿತ್ತು. 1966ರಲ್ಲಿ ಎಸ್‌ಜೆಎಂ ವಿದ್ಯಾಪೀಠ ಸ್ಥಾಪನೆ ಮೂಲಕ ನಾನಾ ಶಿಕ್ಷಣ ಸಂಸ್ಥೆಗಳಿಗೆ ಚಾಲನೆ ನೀಡಿದ್ದರು ಎಂದು ತಿಳಿಸಿದರು.
ತುಮಕೂರು ಸಿದ್ಧಗಂಗಾಮಠದ ಹಿರಿಯ ಶ್ರೀಗಳು, ಮಲ್ಲಿಕಾರ್ಜುನ ಶ್ರೀಗಳನ್ನು ಸಾಕ್ಷಾತ್ ಮುರಿಗಿ ಸ್ವಾಮಿಗಳೆಂದೇ ಕರೆಯುತ್ತಿದ್ದರು. ಶ್ರೀಗಳು ಪಟ್ಟಕ್ಕೇರಿ 30 ಹಾಗೂ ಅವರು ಲಿಂಗೈಕ್ಯರಾಗಿ 30 ವರ್ಷವಾಗುತ್ತಿರುವ ಸಂದರ್ಭ ಸ್ಮರಣೀಯಗೊಳಿಸುವ ಈ ಸಮಾರಂಭದಲ್ಲಿ ಶ್ರೀಗಳ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವಿರುತ್ತದೆ. ಇತಿಹಾಸ ಸಂಶೋಧಕರರಾದ ಡಾ.ಲಕ್ಷ್ಮಣ ತೆಲಗಾವಿ ಪ್ರಧಾನ ಸಂಪಾದಕತ್ವ, ಕೆ.ಎಲ್.ರಾಜಶೇಖರ್ ಸಂಪಾದಕತ್ವದಲ್ಲಿ ಸಂಪುಟ ತರಲಾಗಿದೆ ಎಂದರು.
ಅಂದು ಬೆಳಗ್ಗೆ ಶ್ರೀ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ‌್ಯ ಸ್ವಾಮೀಜಿ ಅವರು ಬಸವತತ್ವ ಧ್ವಜಾರೋಹಣ ನೆರವೇರಿಸುವರು. ನಿಡುಮಾಮುಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ, ಇಳಕಲ್ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಶ್ರೀ ಗುರುಮಹಾಂತ ಸ್ವಾಮೀಜಿ, ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ, ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಧಾರವಾಡದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ರಾವಂದೂರು ಶ್ರೀ ಮೋಕ್ಷಪತಿ ಸ್ವಾಮೀಜಿ, ಸರ್ಪಭೂಷಣ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಪ್ರಸನ್ನ ವಾಲ್ಮೀಕಿ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀ ಗುರುಬಸವ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಬಸವ ಮಾಚಿದೇವ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ.
ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಅಧ್ಯಕ್ಷತೆ ವಹಿಸುವರು. ಸದಸ್ಯ ಎಸ್.ಎನ್.ಚಂದ್ರಶೇಖರ್ ಬಸವಮಂಟಪದ ವಸತಿಗೃಹ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಎಂ.ಕಾರಜೋಳ ಸೇರಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವ ಎಚ್.ಆಂಜನೇಯ ಇತರರು ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 9 ಗಂಟೆಗೆ ಮಠದಿಂದ ಒಂಟಿಕಂಬದ ಮಠಕ್ಕೆ ವಾಹನ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು.
*ಅನುಭಾವ ಶ್ರಾವಣ
ಸೋಮವಾರದಿಂದ 30 ದಿನಗಳ ಅನುಭಾವ ಶ್ರಾವಣ ಕಾರ‌್ಯಕ್ರಮ ಜಿಲ್ಲೆಯ ಎಲ್ಲ ತಾಲೂಕಿನ ನಾಲ್ಕೈದು ಹಳ್ಳಿಗಳಲ್ಲಿ ನಡೆಯಲಿದೆ ಎಂದು ಬಸವಕುಮಾರ ಶ್ರೀ ಹೇಳಿದರು. ಯಾವ ಹಳ್ಳಿಯಲ್ಲಿ ಕಾರ‌್ಯಕ್ರಮ ಏರ್ಪಡಿಸಲಾಗುತ್ತದೆಯೋ ಆ ಗ್ರಾಮಸ್ಥರಿಂದ ಅದೇ ದಿನ ಬೆಳಗ್ಗೆ ಮಠದ ಕರ್ತೃಗದ್ದುಗೆಗೆ ವಚನಾಭಿಷೇಕ, ಮಧ್ಯಾಹ್ನ 2 ರಿಂದ 5ರ ವರೆಗೆ ಗ್ರಾಮದಲ್ಲಿ ಬಸವೇಶ್ವರ ಮೆಡಿಕಲ್ ಕಾಲೇಜಿನಿಂದ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸಂಜೆ 6 ಗಂಟೆಗೆ ಶಿವಯೋಗಿಗಳ ಕುರಿತು ಉಪನ್ಯಾಸ ಕಾರ‌್ಯಕ್ರಮವಿರುತ್ತದೆ ಎಂದು ತಿಳಿಸಿದರು.
*ನವೀಕೃತ ವಿದ್ಯಾರ್ಥಿನಿಲಯ
ಚಿತ್ರದುರ್ಗ ಜೋಗಿಮಟ್ಟಿ ರಸ್ತೆ ಜಯದೇವ ವಿದ್ಯಾರ್ಥಿನಿಲಯವನ್ನು ಮರು ಆರಂಭಿಸಲಾಗುತ್ತಿದೆ. ಶೀಘ್ರದಲ್ಲೇ ನವೀಕೃತ ಕಟ್ಟಡ ಉದ್ಘಾಟನೆ ನೆರವೇರಲಿದೆ ಎಂದು ಬಸವಕುಮಾರ ಶ್ರೀ ತಿಳಿಸಿದರು.