ಮಲ್ಲಾಪುರ ಕೆರೆ ಅಭಿವೃದ್ಧಿಗೆ ಎರಡು ತಿಂಗಳ ಗಡವು

ctd mallapura lake----
Published on

ಚಿತ್ರದುರ್ಗ: ನಗರದ ಹೊರವಲಯದ ಮಲ್ಲಾಪುರ ಕೆರೆಯನ್ನು ಉತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವಂತೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದರು.

ಬುಧವಾರ ಕೆರೆ ವೀಕ್ಷಿಸಿ ಅಧಿಕಾರಿಗಳ ನಿರ್ಲಕ್ಷೃದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರ ಅಹವಾಲು ಆಲಿಸಿ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ಸರ್ವೆ ನಡೆಸಿ ಕಾನೂನು ರೀತಿ ಕೆರೆ ಒತ್ತುವರಿ ತೆರವುಗೊಳಿಸುವಂತೆ ತಹಸೀಲ್ದಾರ್ ಡಾ. ನಾಗವೇಣಿ ಅವರಿಗೆ ಸೂಚಿಸಿದರು.

ಕೆರೆ ಸುತ್ತ ತಂತಿ ಬೇಲಿ ಹಾಕಿಸಿ ನಂತರ ಬದು ನಿರ್ಮಿಸಬೇಕು. ಕೆರೆಯ ಕಾಲುವೆ ಸ್ವಚ್ಛಗೊಳಿಸಿ ಅಗತ್ಯವಿದ್ದರೆ ವಿಸ್ತರಣೆಗೆ ಒಂದು ತಿಂಗಳ ಒಳಗೆ ಕ್ರಮ ವಹಿಸುವಂತೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗೆ ಸೂಚಿಸಿದರು.

ಗಡುವಿನೊಳಗೆ ಕೆರೆ ಅಭಿವೃದ್ಧಿ ಆಗದಿದ್ದರೆ ಸರ್ಕಾರಕ್ಕೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ಸಮಸ್ಯೆ ಪರಿಹರಿಸುವುದಾಗಿ ಬುರುಡೆ ಬಿಡುವುದು ಬೇಡವೆಂದು ಎಚ್ಚರಿಸಿ, ಪ್ರತಿ ವಾರಕ್ಕೆ ಭೇಟಿ ನೀಡಿ ಪ್ರಗತಿ ವರದಿ ಸಲ್ಲಿಕೆಗೆ ಲೋಕಾಯುಕ್ತ ಎಸ್‌ಪಿ ಎನ್. ವಾಸುದೇವರಾಮ ಅವರಿಗೆ ಸೂಚಿಸಿದರು.

ಕಲುಷಿತ ನೀರನ್ನು ಸಂಸ್ಕರಿಸಿ ಕೆರೆಗೆ ಬಿಡಬೇಕು. ಕೆರೆಯಲ್ಲಿ ಕಳೆಬಳ್ಳಿ ತೆರವುಗೊಳಿಸಬೇಕು. ಹೂಳೆತ್ತಿ,ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹಕ್ಕೆ ಕ್ರಮ ವಹಿಸಬೇಕೆಂದ ಅವರು, ಅಭಿವೃದ್ಧಿಗೆ ವಿಜ್ಞಾನಿಗಳ ಸಲಹೆ ಪಡೆಯುವಂತೆ ಸೂಚಿಸಿದರು. ಕೆರೆ ಕೋಡಿ ದುರಸ್ತಿ ಮಾಡ ಬೇಕೆಂದರು.

ಕೆರೆ ಸುತ್ತ ತ್ಯಾಜ್ಯ ನೋಡಿ ಗರಂ ಆದ ನ್ಯಾಯಮೂರ್ತಿ,ತಪ್ಪಿಸ್ಥರಿಗೆ ದಂಡ ವಿಧಿಸಿ,ಅದಕ್ಕೂ ಮಣಿಯದಿದ್ದರೆ ಎಫ್‌ಐಆರ್ ದಾಖಲಿಸಬೇಕು. ತ ಕ್ಷಣಕ್ಕೆ ಪಿಳ್ಳಕೇರನಹಳ್ಳಿ ಶಾಲೆ ಚರಂಡಿ ಕ್ಲೀನ್ ಮಾಡಬೇಕು. ಎನ್‌ಎಚ್ 13 ಹೊಸ ಹೈವೆ ನಿರ್ಮಾಣದ ತೂಬು,ನಾಲೆ ಮುಚ್ಚಿದೆ ಎಂದು ಗ್ರಾ ಮಸ್ಥರು ದೂರಿದಾಗ,ಸೂಕ್ತ ಕ್ರಮವಹಿಸುವುದಾಗಿ ಡಿಸಿ ಟಿ.ವೆಂಕಟೇಶ್ ತಿಳಿಸಿದರು.

ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಇ ಅನಿಲ್ ಕುಮಾರ್, ಎಇಇ ಹೇಮಂತಕುಮಾರ್, ನಗರಸಭೆ ಆಯುಕ್ತೆ ಎಂ. ರೇಣುಕಾ, ಸಣ್ಣ ನೀರಾವರಿ ಇಲಾಖೆ ಇಇ ಕೆ.ಎಂ. ಕೃಷ್ಣ ಮತ್ತಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net