ಮಲ್ಲಳ್ಳಿ ಗ್ರಾಮಕ್ಕಿಲ್ಲ ಉತ್ತಮ ರಸ್ತೆ

16spt1--
ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಗ್ರಾಮದ ರಸ್ತೆಯ ದುಸ್ಥಿತಿ.
Published on

ಸೋಮವಾರಪೇಟೆ: ಪ್ರವಾಸಿಗರ ನೆಚ್ಚಿನ ತಾಣ ಮಲ್ಲಳ್ಳಿ ಜಲಪಾತದಿಂದ ಒಂದೂವರೆ ಕಿಲೀಮೀಟರ್ ದೂರದಲ್ಲಿರುವ ಮಲ್ಲಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರು ಕಂಡು 75 ವರ್ಷ ಕಳೆದಿದೆ.

ಇದು ಆಶ್ಚರ್ಯ ಎನಿಸಬಹುದು. ಆದರೆ ಸತ್ಯ ಸಂಗತಿ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಎಷ್ಟೋ ಬಾರಿ ಜಲಪಾತ ಸ್ಥಳಕ್ಕೆ ಬಂದು ಹೋಗಿದ್ದಾರೆ. ಆದರೆ ಈವರೆಗೂ ಮಲ್ಲಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟಿಲ್ಲ. ಅಲ್ಲದೆ ಭರವಸೆಯನ್ನು ಪ್ರತಿ ಚುನಾವಣೆ ಯಲ್ಲೂ ಕೊಡುತ್ತಾರೆ. ಪರಿಣಾಮ ಗ್ರಾಮದವರು ಪ್ರತಿ ಚುನಾವಣೆಯಲ್ಲೂ ಮತ ಹಾಕಿದ್ದಾರೆ. ಆದರೆ ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ.

ಮೂರು ದಶಕಗಳ ಹಿಂದೆ ಮಲ್ಲಳ್ಳಿ ಗ್ರಾಮದಲ್ಲಿ 20 ಕುಟುಂಬ ವಾಸಿಸುತ್ತಿತ್ತು. ಗ್ರಾಮ ಕುಗ್ರಾಮವಾಗಿಯೇ ಉಳಿದ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ 12 ಕುಟುಂಬ ಮನೆ ತೊರೆದು ಪಟ್ಟಣದಲ್ಲಿ ಬಾಡಿಗೆ ಮನೆ ಮಡಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದೆ. ಇನ್ನೂ ಕೆಲವರು ನೌಕರಿಗಾಗಿ ನಗರ ಪ್ರದೇಶ ಸೇರಿದ್ದಾರೆ. ಕೃಷಿ ಪಾಳು ಬಿಡಲೇಬೇಕಾದ ಅನಿವಾರ್ಯತೆ ಒದಗಿದೆ.

ಎರಡು ದಶಕಗಳ ಹಿಂದೆ ಒಂದೂವರೆ ಕಿ.ಮೀ. ರಸ್ತೆಯನ್ನು ಡಾಂಬರೀಕರಣಗೊಳಿಸಿದ್ದರೆ ಇವತ್ತಿಗೆ ಮಲ್ಲಳ್ಳಿ ಗ್ರಾಮ ಮುಂದುವರಿದ ಕೃಷಿ ಗ್ರಾಮವಾಗಿರುತ್ತಿತ್ತು. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರೆತೆಯಿಂದ ಇಂದಿಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಈ ಗ್ರಾಮದಲ್ಲಿ ಉತ್ತಮ ಹವಮಾನವಿದ್ದು, ಕಾಫಿ, ಕಾಳುಮೆಣಸು, ಅಡಿಕೆ, ಭತ್ತ ಬೆಳೆಯಲು ಸೂಕ್ತ ಪ್ರದೇಶ. ಅತಿವೃಷ್ಟಿ ಸಂಭವಿಸ ದಿದ್ದರೆ ಉತ್ತಮ ಫಸಲು ಸಿಗುತ್ತದೆ. ಆದರೆ ಮೂಲ ಸೌಕರ್ಯವಿಲ್ಲದೆ, ಬಹುತೇಕ ಕುಟುಂಬಗಳು ಪಟ್ಟಣದಲ್ಲಿ ವಾಸ ಮಾಡುತ್ತಿದೆ. ಅದರಲ್ಲೂ ಯುವಕ, ಯುವತಿಯರು ನಗರ ಪ್ರದೇಶಕ್ಕೆ ಉದ್ಯೋಗ ಅರಸಿ ಹೋಗಿದ್ದಾರೆ.

ಪ್ರವಾಸೋದ್ಯಮ ಇಲಾಖೆ ಮೂಲಕ ಮಲ್ಲಳ್ಳಿ ಜಲಪಾತ ಅಭಿವೃದ್ಧಿಗೆ ರಾಜ್ಯ ಸರ್ಕಾರ 3.50 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಿ, ಒಂದು ಕಿ.ಮೀ.ನಷ್ಟು ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿತು. ಆದರೆ ಮಲ್ಲಳ್ಳಿ ಗ್ರಾಮಕ್ಕೆ ತೆರಳುವ ಒಂದು ಕಿ.ಮೀ.ರಸ್ತೆಗೆ ಈವರೆಗೆ ನಯಾಪೈಸೆ ಅನುದಾನ ಸಿಕ್ಕಿಲ್ಲ. ಇವತ್ತಿಗೂ 1.50 ಕೋಟಿ ರೂ.ವಿಶೇಷ ಅನುದಾನ ಕಲ್ಪಿಸಿದರೆ ಗ್ರಾಮಕ್ಕೆ ರಸ್ತೆಯಾಗುತ್ತದೆ. ರಸ್ತೆಯಾದರೆ ತನ್ನಷ್ಟಕ್ಕೆ ಮೂಲ ಸೌಕರ್ಯಗಳು ದೊರೆಯುತ್ತವೆ. ಕೃಷಿಕರು ಗ್ರಾಮಕ್ಕೆ ಹಿಂದುರುಗಿ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾರೆ ಎಂಬುದು ಸ್ಥಳೀಯರ ಅನಿಸಿಕೆ.ಗ್ರಾಮ ವ್ಯಾಪ್ತಿಯಲ್ಲಿ ಸರಾಸರಿ 200 ರಿಂದ 550 ಇಂಚು ವಾರ್ಷಿಕ ಮಳೆ ಬೀಳುತ್ತದೆ. ಅಕಾಲಿಕ ಮಳೆ, ಕಾಡಾನೆ, ಕಾಡುಕೋಣಗಳು ಸೇರಿದಂತೆ ಇತರ ಕಾಡುಪ್ರಾಣಿಗಳ ಕಾಟವಿದ್ದರೂ, ಕೃಷಿ ಕೈಹಿಡಿಯುತ್ತದೆ.

ಮಲ್ಲಳ್ಳಿ ಅಭಿವೃದ್ಧಿಯಾಗಿಲ್ಲ ಎಂಬ ಕಾರಣಕ್ಕೆ ಗ್ರಾಮದ ಯುವಕರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಯುವತಿಯರನ್ನು ಮದುವೆ ಮಾಡಲು ಕಷ್ಟವಾಗುತ್ತಿದೆ ಎಂದು ಹಿರಿಯರು ನೊಂದು ಹೇಳುತ್ತಾರೆ. ಈ ಕಾರಣದಿಂದ ಯುವಕ-ಯುವತಿಯರು ಗ್ರಾಮ ತೊರೆದು ನಗರ ಪ್ರದೇಶಗಳಲ್ಲಿ ಸಣ್ಣಪುಟ್ಟ ನೌಕರಿ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಪರಿಣಾಮ ಈ ಗ್ರಾಮ ಈಗ ಯುವತಿ, ಯುವಕರಿಲ್ಲದ ಗ್ರಾಮವೆಂದೇ ಕರೆಸಿಕೊಂಡಿದೆ.

ಕಂದಾಯ ಇಲಾಖೆಯ ನಿರ್ಲಕ್ಷೃ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ಇಲ್ಲಿನ ಹೆಚ್ಚಿನ ಕುಟುಂಬಗಳಿಗೆ ಆಸ್ತಿ ದಾಖಲಾತಿ ಸಿಕ್ಕಿಲ್ಲ. ಮಳೆಯಿಂದ ಹಾನಿಯಾದರೆ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ. ಅರ್ಜಿ ಕೊಟ್ಟರೂ ಕಂದಾಯ ಇಲಾಖೆಯಿಂದ ಫಸಲು ಹಾನಿಗೆ ಪರಿಹಾರ ಸಿಗುತ್ತಿಲ್ಲ. ಪ್ರಕೃತಿ ವಿಕೋಪ, ಅತಿವೃಷ್ಟಿಯಿಂದ ಆಸ್ತಿಪಾಸ್ತಿ ಕಳೆದುಕೊಂಡವರಿಗೂ ಪರಿಹಾರ ಸಿಗುತ್ತಿಲ್ಲ. ಹಾಗಾಗಿ ಕಂದಾಯ ಇಲಾಖೆ ನಿಯಮಗಳನ್ನು ಸರಳೀಕರಣಗೊಳಿಸಿ ಆಸ್ತಿಯ ಹಕ್ಕುಪತ್ರ ನೀಡಬೇಕು. ಹಕ್ಕುಪತ್ರ ಸಿಕ್ಕರೆ ಮಾತ್ರ ಮಳೆಹಾನಿ ಪರಿಹಾರ ಪಡೆಯಲು ಸಾಧ್ಯ ಎನ್ನುತ್ತಾರೆ ಗ್ರಾಮಸ್ಥರು.

ಕೃಷಿ ಮಾಡಲು ಯೋಗ್ಯ ಭೂಮಿಯಿದ್ದು, ಕಾಫಿ ಹಾಗೂ ಕಾಳುಮೆಣಸು ಬೆಳೆಯಬಹುದಾಗಿದೆ. ಆದರೆ ಕಾಫಿ ಮಂಡಳಿ, ತೋಟಗಾರಿಕೆ ,ಕೃಷಿ ಇಲಾಖೆಯಿಂದ ಸೌಲಭ್ಯಗಳು ಸಿಗುತ್ತಿಲ್ಲ. ಆಸ್ತಿ ದಾಖಲೆಗಳನ್ನು ಕೇಳುತ್ತಾರೆ. ಹಾಗಾಗಿ ಕುಟುಂಬ ನಿರ್ವಹಣೆಗೆ ಭತ್ತ ಬೆಳೆಯಬೇಕು. ಅಕಾಲಿಕ ಮಳೆಯಿಂದ ಭತ್ತ ಬೆಳೆಯುವುದು ಕಷ್ಟವಾಗುತ್ತಿದೆ. ಯಂತ್ರೋಪರಣಗಳಿಂದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಭತ್ತ ಬೆಳೆಯುವುದಕ್ಕೆ ಎಕರೆಗೆ 20 ಸಾವಿರ ರೂ.ಸಹಾಯಧನ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ಭತ್ತದ ಗದ್ದೆಗಳನ್ನೂ ಪಾಳು ಬಿಡಬೇಕಾದ ಅನಿವಾರ್ಯತೆ ಒದಗಲಿದೆ ಎಂದು ಸಮಸ್ಯೆಗಳನ್ನು ಗ್ರಾಮಸ್ಥರು ಎಳೆಎಳೆಯಾಗಿ ಬಿಚ್ಚಿಟ್ಟರು.

ಮಲ್ಲಳ್ಳಿ ಗ್ರಾಮಕ್ಕೆ ರಸ್ತೆ ಮಾಡಿಕೊಟ್ಟರೆ ಕೆಲ ಸಮಸ್ಯೆಗಳು ಬಗೆಹರಿಯುತ್ತದೆ. ಈಗ ಮಕ್ಕಳನ್ನು ನೆಂಟರಿಷ್ಟರ ಮನೆಯಲ್ಲಿ ಬಿಟ್ಟು ವಿದ್ಯಾಭ್ಯಾಸ ಕೊಡಿಸಬೇಕಾಗಿದೆ. ಮಳೆಗಾಲದ ನಾಲ್ಕು ತಿಂಗಳು ವಿದ್ಯುತ್ ಇರುವುದಿಲ್ಲ. ಈಗ ಹದಿನೈದು ದಿನದಿಂದ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿದ್ದೆವು. ನಮ್ಮ ನೋವನ್ನು ಯಾರೂ ಕೇಳುತ್ತಿಲ್ಲ. ಬೈಕ್ ಮತ್ತು ಕಾರುಗಳು ಗ್ರಾಮಕ್ಕೆ ಬರುವುದಿಲ್ಲ. ಮಳೆಗಾಲದಲ್ಲಿ ಕಾಲ್ನಡಿಗೆಯಲ್ಲೂ ಹೋಗಲು ಕಷ್ಟ. ವೃದ್ಧರು ಆರೋಗ್ಯ ತಪ್ಪಿದರೆ ಒಂದೂವರೆ ಕಿ.ಮಿ.ಹೊತ್ತು ಸಾಗಬೇಕಾಗಿದೆ.
ಗಣೇಶ್, ಮಲ್ಲಳ್ಳಿ ಗ್ರಾಮ

ಸುಮಾರು ಇನ್ನೂರು ವರ್ಷಗಳಿಂದ ಮಲ್ಲಳ್ಳಿ ಗ್ರಾಮದಲ್ಲಿ ಕೃಷಿಕರು ನೆಲೆಸಿದ್ದರು ಎಂದು ಹಿರಿಯರು ಹೇಳುತ್ತಾರೆ. ಮೂರು ದಶಕಗಳ ಹಿಂದೆಯೇ ಮಲ್ಲಳ್ಳಿ ಗ್ರಾಮಕ್ಕೆ ರಸ್ತೆಯಾಗಿದ್ದರೆ ಯಾರೂ ಗ್ರಾಮ ತೊರೆಯುತ್ತಿರಲಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಊರನ್ನೇ ತೊರೆದಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಇಂತಹ ಸಂಕಷ್ಟಕ್ಕೆ ಸಿಲುಕಿದ್ದೇವೆ.
ಡಿ.ಎಂ.ಸತೀಶ್, ಕೃಷಿಕ, ಮಲ್ಲಳ್ಳಿ ನಿವಾಸಿ

ಮಲ್ಲಳ್ಳಿ ಜಲಪಾತ ಸ್ಥಳದಿಂದ ಒಂದು ಕಿ.ಮೀ. ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಬೇಕು. 2018ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಹಿನ್ನೆಲೆಯಲ್ಲಿ ಮಲ್ಲಳ್ಳಿ ಗ್ರಾಮದಲ್ಲಿ ಭೂಕುಸಿತ ಸಂಭವಿಸಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಲಿಲ್ಲ. ಈವರೆಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಈಗಿನ ಶಾಸಕರಾದ ಡಾ.ಮಂತರ್‌ಗೌಡ ಅವರಿಗೆ ರಸ್ತೆ ಅಭಿವೃದ್ಧಿಗಾಗಿ ಮನವಿ ಪತ್ರ ಸಲ್ಲಿಸಿದ್ದೇವೆ. ರಸ್ತೆ ಮಾಡುತ್ತಾರೆ ಎಂಬ ನಂಬಿಕೆ ಇದೆ.
ವೆಂಕಟೇಶ್, ಕೃಷಿಕ, ಮಲ್ಲಳ್ಳಿ ಗ್ರಾಮ

ಮಲ್ಲಳ್ಳಿ ರಸ್ತೆಯ ಸರ್ವೇಯನ್ನು ಖುದ್ದಾಗಿ ಮಾಡಿದ್ದೇನೆ. ಮಳೆಹಾನಿ ಪರಿಹಾರದಲ್ಲಿ ಅನುದಾನ ಕಲ್ಪಿಸಲಾಗುವುದು. ಸರ್ಕಾರದಿಂದ ಹಣ ಬಿಡುಗಡೆಯಾದ ತಕ್ಷಣ ಶಾಸಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮವಹಿಸಲಾಗುವುದು.
ವೀರೇಂದ್ರ ಕುಮಾರ್ ಎಇಇ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ, ಸೋಮವಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net