

ಹನೂರು: ಉದ್ಯೋಗವಿಲ್ಲದೆ ವಲಸೆ ಹೋಗಿರುವ ಕೆಲ ಜನರು… ಬರಿದಾದ ತೊಂಬೆಗಳು… ಒಡೆದು ಹೋಗಿರುವ ನೀರಿನ ಪೈಪ್‌ಲೈನ್‌ಗಳು… ಸಿಸಿ ರಸ್ತೆ, ಚರಂಡಿ ಇಲ್ಲದೆ ಬೀದಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು… ಬೆಳೆದು ನಿಂತಿರುವ ಗಿಡಗಂಟಿಗಳು…
ಇದು ತಾಲೂಕು ಕೇಂದ್ರದಿಂದ 7 ಕಿಮೀ ಅಂತರದಲ್ಲಿರುವ ಮಲ್ಲಯ್ಯನಪುರ ಗ್ರಾಮದ ವಾಸ್ತವ ಚಿತ್ರಣ. ಗ್ರಾಮವು ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ಹೆಚ್ಚಾಗಿ ಯಾದವ (ಗೊಲ್ಲರು) ಹಾಗೂ ಪರಿಶಿಷ್ಟ ಜಾತಿ ಸಮುದಾಯದ ಜನರು ವಾಸಿಸುತ್ತಿದ್ದಾರೆ.
ಇಲ್ಲಿ 100ಕ್ಕೂ ಹೆಚ್ಚು ಕುಟುಂಬಗಳಿದ್ದು, ಸುಮಾರು 500 ಜನಸಂಖ್ಯೆ ಇದೆ. ಆದರೆ ಗ್ರಾಪಂ ಆಡಳಿತ ಈ ಗ್ರಾಮವನ್ನು ಕಡೆಗಣಿಸಿದ್ದು, ಜನರಿಗೆ ಸಮರ್ಪಕ ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿದೆ. ಅಲ್ಲದೇ ನರೇಗಾ ಯೋಜನೆಯಡಿ ಉದ್ಯೋಗ ನೀಡದ ಹಿನ್ನೆಲೆಯಲ್ಲಿ ಕೆಲವರು ಗುಳೆ ಹೋಗಿದ್ದಾರೆ. ಇದರಿಂದ ಸರ್ಕಾರದ ಸವಲತ್ತುಗಳು ಇಲ್ಲಿನ ಜನರಿಗೆ ದಕ್ಕುತ್ತಿಲ್ಲ. ಈ ಬಗ್ಗೆ ಗ್ರಾಪಂ ಆಡಳಿತಕ್ಕೆ ತಿಳಿದಿದ್ದರೂ ಮೌನ ವಹಿಸಿರುವ ಪರಿಣಾಮ ಇಲ್ಲಿನ ನಿವಾಸಿಗಳು ಸಮಸ್ಯೆ ನಡುವೆಯೇ ಜೀವನ ನಡೆಸುವಂತಾಗಿದೆ.
ಹರಿಯುತ್ತಿರುವ ಕೊಳಚೆ ನೀರು: ಗ್ರಾಮದಲ್ಲಿ ಮುಖ್ಯವಾಗಿ 5 ಬೀದಿಗಳಿದ್ದು, ಇದರಲ್ಲಿ ಮಾರಮ್ಮನ ದೇಗುಲದ ಮುಂಭಾಗ ತುಸು ದೂರದವರೆಗೆ ಮಾತ್ರ ಸಿಸಿ ರಸ್ತೆ ನಿರ್ಮಿಸಲಾಗಿದೆ. ಉಳಿದಂತೆ ಯಾವುದೂ ಅಭಿವೃದ್ಧಿಯಾಗಿಲ್ಲ. ಪರಿಣಾಮ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿದೆ. ಮಳೆಗಾಲದಲ್ಲಿ ಈ ಮಾರ್ಗಗಳಲ್ಲಿ ಸಂಚಾರ ದುಸ್ತರವೇ ಸರಿ. ಇತ್ತ ಚರಂಡಿ ನಿರ್ಮಿಸದ ಪರಿಣಾಮ ಮನೆ ಬಳಕೆ ನೀರು ಬೀದಿಯಲ್ಲಿ ಹರಿಯುತ್ತಿದ್ದು, ಕೆಲವು ಕಡೆಗಳಲ್ಲಿ ಕೊಳಚೆ ನೀರು ಮಡುಗಟ್ಟಿ ನಿಂತಿದೆ. ಪರಿಣಾಮ ಸೊಳ್ಳೆಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದ್ದು, ಅನೈರ್ಮಲ್ಯ ಮನೆ ಮಾಡಿದೆ. ಇದರಿಂದ ನಿವಾಸಿಗಳಲ್ಲಿ ರೋಗರುಜಿನಗಳ ಭೀತಿ ಆವರಿಸಿದೆ. ಈ ಬಗ್ಗೆ ಗ್ರಾಪಂ ಅಧಿಕಾರಿ ಹಾಗೂ ಜನಪ್ರತಿನಿಧಿಗಳಾಗಲಿ ಗಮನಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಬರಿದಾಗಿ ನಿಂತಿರುವ ತೊಂಬೆಗಳು: ಗ್ರಾಮದ ಸಮೀಪದಲ್ಲಿ ಕೊರೆಸಿರುವ ಬೋರ್‌ನಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಮನೆಗಳಿಗೆ ಕೊಳವೆ ನಲ್ಲಿ ಸಂಪರ್ಕ ನೀಡಲಾಗಿದೆ. ಆದರೆ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಇನ್ನು ಗ್ರಾಮದಲ್ಲಿ 8 ತೊಂಬೆಗಳಿದ್ದು, ಮುಖ್ಯ ರಸ್ತೆಯ ಬದಿಯಲ್ಲಿನ 2 ತೊಂಬೆ ಹೊರತುಪಡಿಸಿ ಉಳಿದ ತೊಂಬೆಗಳಿಗೆ ನೀರು ಸರಬರಾಜಾಗುತ್ತಿಲ್ಲ. ಇದರಿಂದ ತೊಂಬೆಗಳು ಬರಿದಾಗಿ ನಿಂತಿದ್ದು, ಕೆಲವು ತೊಂಬೆಗಳ ಬಳಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಇತ್ತ ಕೆಲವು ಕಡೆಗಳಲ್ಲಿ ಪೈಪ್‌ಲೈನ್ ಒಡೆದು ಹೋಗಿದ್ದು, ನೀರು ಪೋಲಾಗುತ್ತಿದೆ.
ಚರಂಡಿ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತ: ಗ್ರಾಮದ 2 ಬೀದಿಯಲ್ಲಿ 10 ವರ್ಷಗಳ ಹಿಂದೆ ಕಿರಿದಾದ ಚರಂಡಿ ನಿರ್ಮಿಸಲಾಗಿದ್ದು, ನಿರ್ವಹಣೆ ಕೊರತೆಯ ಪರಿಣಾಮ ಕೆಲವು ಕಡೆಗಳಲ್ಲಿ ಮುಚ್ಚಿ ಹೋಗಿದ್ದರೆ ಇನ್ನು ಕೆಲವು ಕಡೆಗಳಲ್ಲಿ ಕಲ್ಲುಗಳು ಕಿತ್ತು ಬಂದಿದ್ದು, ಹೂಳು ತುಂಬಿದೆ. ಇತ್ತೀಚೆಗೆ ದೊಮ್ಮನಗದ್ದೆ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಬದಿ ಚರಂಡಿ ನಿರ್ಮಿಸಲಾಗಿದ್ದು, ಅರ್ಧಕ್ಕೆ ಸ್ಥಗಿತಗೊಂಡಿದೆ. ಇದರಿಂದ ಕೊಳಚೆ ನೀರು ಸರಾಗವಾಗಿ ಹರಿಯಲು ತೊಡಕಾಗಿ ಪರಿಣಮಿಸಿದೆ.
ಗುಳೆ ಹೋಗಿರುವ ಜನರು: ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸರ್ಕಾರ ನರೇಗಾ ಯೋಜನೆ ಜಾರಿಗೆ ತಂದಿದೆಯಾದರೂ ಗ್ರಾಪಂ ಆಡಳಿತ ಉದ್ಯೋಗ ನೀಡುತ್ತಿಲ್ಲ. ಪರಿಣಾಮ ಗ್ರಾಮದ ಕೆಲ ಕುಟುಂಬ ಕೂಲಿ ಅರಿಸಿ ಹೆಚ್ಚಾಗಿ ಬೆಂಗಳೂರು ಕಡೆಗೆ ಹೋಗಿದೆ.
ಕಾಡು ಪ್ರಾಣಿಗಳ ಕಾಟ: ಗ್ರಾಮದಲ್ಲಿ ಬಹುತೇಕ ಕುಟುಂಬ ಖುಷ್ಕಿ ಜಮೀನನ್ನು ಹೊಂದಿದ್ದು, ಕೃಷಿ ಮಾಡುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಕಾಡು ಪ್ರಾಣಿಗಳು ಜಮೀನಿಗೆ ಆಗಾಗ್ಗೆ ಲಗ್ಗೆ ಇಡುತ್ತಿದ್ದು, ಫಸಲನ್ನು ನಾಶ ಮಾಡುತ್ತಿವೆ. ಜತೆಗೆ ಜಾನುವಾರುಗಳ ಮೇಲೆ ದಾಳಿ ನಡೆಸಿವೆ. ಇದರಿಂದ ರೈತರಲ್ಲಿ ಜೀವಭಯ ಕಾಡುತ್ತಿದ್ದು, ಕೆಲ ರೈತರು ಕೃಷಿ ಮಾಡುವುದನ್ನೇ ಬಿಟ್ಟಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಗ್ರಾಪಂ ಆಡಳಿತ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸುವುದರ ಮೂಲ ಸೌಕರ್ಯ ಒದಗಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
ಗ್ರಾಮದ ಕೆಲವೆಡೆ ಪೈಪ್‌ಲೈನ್ ಹಾಳಾಗಿದೆ. ಇದರಿಂದ ತೊಂಬೆಗಳಿಗೆ ನೀರು ಸರಬರಾಗುತ್ತಿಲ್ಲ. ಸಿಸಿ ಹಾಗೂ ಚರಂಡಿ ನಿರ್ಮಿಸಿಲ್ಲ. ಕೊಳಚೆ ನೀರು ಬೀದಿಯಲ್ಲಿ ಹರಿಯುತ್ತಿದೆ. ಮಳೆಗಾಲದ ವೇಳೆ ತಿರುಗಾಡಲು ತೊಂದರೆ ಪಡುವಂತಾಗಿದೆ. ಕೆಲವರು ಉದ್ಯೋಗವನ್ನು ಹರಿಸಿ ಬೆಂಗಳೂರಿಗೆ ವಲಸೆ ಹೋಗಿದ್ದಾರೆ. ಆದರೆ ಈ ಬಗ್ಗೆ ಗ್ರಾಪಂ ಆಡಳಿತ ಕಿಂಚಿತ್ತೂ ಗಮನಹರಿಸುತ್ತಿಲ್ಲ.
ಶಿವರಾಜು, ಗ್ರಾಮಸ್ಥ
ಗ್ರಾಮದ ಎಲ್ಲ ಮನೆಗಳ ಕೊಳವೆ ನಲ್ಲಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಹಾಗಾಗಿ ತೊಂಬೆಗಳಿಗೆ ನೀರು ಪೂರೈಕೆ ಅವಶ್ಯಕತೆ ಇಲ್ಲ. ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಈಗಾಗಲೇ ಕ್ರಿಯಾಯೋಜನೆ ತಯಾರಿಸಿದ್ದು, ಅಗತ್ಯ ಕ್ರಮವಹಿಸಲಾಗಿದೆ.
ಮರಿಸ್ವಾಮಿ, ಪಿಡಿಒ ಕೌದಳ್ಳಿ ಗ್ರಾಪಂ