

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ವಿಚಾರವಾಗಿ ನಡೆಯುತ್ತಿರುವ ಹೋರಾಟಗಳಿಗೆ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಮ್ಮ ಬೆಂಬಲ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಜು. 30ರಂದು ಆಯೋಜಿಸಿರುವ ಮೌನ ಪ್ರತಿಭಟನೆಯಲ್ಲಿ ಜಿಲ್ಲೆಯ ಜನರು ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉತ್ತರ ಕನ್ನಡ ಜಿಲ್ಲೆಗೆ ಅತ್ಯವಶ್ಯವಾಗಿದೆ. ನಾಡಿನ ಸರ್ವತೋಮುಖವಾದ ಅಭಿವೃದ್ಧಿಗೆ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರವಾದದ್ದು. ಈ ಜಿಲ್ಲೆಯ ಜನರ ಸಂಕಷ್ಟಕ್ಕೆ ಪರಿಹಾರವಾಗಿ ಸರ್ಕಾರದಿಂದ ಅಪೇಕ್ಷಿಸುತ್ತಿರುವ ಅತ್ಯಂತ ಮೂಲಭೂತ ಹಾಗೂ ಅನಿವಾರ್ಯವಾದ ವ್ಯವಸ್ಥೆ ಎಂದರೆ ಅದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಎಂದೂ ಹೇಳಿದ್ದಾರೆ.
ಪ್ರಾಮಾಣಿಕವಾದ ಈ ಬೇಡಿಕೆಯು ಪ್ರತಿಭಟನಾ ಸ್ವರೂಪವನ್ನು ಪಡೆದುಕೊಳ್ಳದಂತೆ ಮುಖ್ಯಮಂತ್ರಿಯವರು ಈ ವಿಷಯದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಿದೆ ಎಂದಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಸಮಗ್ರ ಜನತೆಯ ಒತ್ತಾಯಪೂರ್ವಕವಾದ ಈ ಬೇಡಿಕೆಯನ್ನು ಸರ್ಕಾರಕ್ಕೆ ಪರಿಣಾಮಕಾರಿಯಾಗಿ ತಲುಪಿಸಬೇಕಿದೆ. ಈ ಉದ್ದೇಶದಿಂದ ಜು. 30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾದ ಮೌನ ಪ್ರತಿಭಟನೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರಕನ್ನಡ ಜಿಲ್ಲೆಯ ಎಲ್ಲರೂ ನಮ್ಮ ಜಿಲ್ಲೆ ಎಂಬ ಅಭಿಮಾನದಿಂದ ಪಾಲ್ಗೊಂಡು, ಸರ್ಕಾರಕ್ಕೆ ಈ ಜಿಲ್ಲೆಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವಂತಾಗಬೇಕು ಎಂದು ಶ್ರೀಗಳು ಆಶಿಸಿದ್ದಾರೆ.