

ಚಿಕ್ಕಬಳ್ಳಾಪುರ: ಜೀವನದ ಮಹಾಭಾಗ್ಯ ಎನಿಸಿಕೊಂಡಿರುವ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್ ಸಲಹೆ ನೀಡಿದರು.
ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ರಾಷ್ಟ್ರೀಯ ಮಲೇರಿಯಾ ದಿನ ಆಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಮತ್ತು ಜಿಲ್ಲಾಸ್ಪತ್ರೆ ಸೋಮವಾರ ಹಮ್ಮಿಕೊಂಡ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಒಳ್ಳೆಯ ನೈರ್ಮಲ್ಯ ನಿರ್ವಹಣೆ, ಶಿಸ್ತು ಬದ್ಧತೆಯು ಉತ್ತಮ ಆರೋಗ್ಯದಿಂದ ನೆಮ್ಮದಿಯ ಜೀವನ ನಡೆಸಲು ಸಹಕಾರಿ ಎಂದು ತಿಳಿಸಿದರು.
ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಳದಿಂದ ಮಲೇರಿಯಾ, ಡೆಂಘೆ, ಚಿಕೂನ್‌ಗುನ್ಯಾ ಸೇರಿ ನಾನಾ ರೋಗಗಳು ವ್ಯಾಪಕವಾಗಿ ಹರಡುತ್ತವೆ. ಇದಕ್ಕೆ ಪ್ರತಿಯೊಬ್ಬರು ಮುಂಜಾಗ್ರತಾ ಕ್ರಮಗಳ ಪಾಲನೆಯೊಂದಿಗೆ ಆರೋಗ್ಯ ಕಾಪಾಡಿಕೊಳ್ಳಬೇಕು. ಚಿಕ್ಕಬಳ್ಳಾಪುರವನ್ನು 2025 ರೊಳಗಾಗಿ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸುವ ಗುರಿ ಸಾಧನೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದ್ ರೆಡ್ಡಿ ಬಾಬು ಮಾತನಾಡಿ, ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣವು ಪ್ರತಿಯೊಬ್ಬ ಪ್ರಜೆಯ ಪ್ರಮುಖ ಜವಾಬ್ದಾರಿ ಎಂದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಎಂ.ಪ್ರಕಾಶ್ ಮಾತನಾಡಿ, ಮಲೇರಿಯಾಗೆ ಪ್ಲಾಸೋಡಿಯಂ ಎಂಬ ಪರಾವಲಂಬಿ ಜೀವಿ ಕಾರಣ. ಇದು ಸೋಂಕಿತ ಅನಾಲೀಸ್ ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ವಿಪರೀತ ಚಳಿ, ಜ್ವರ, ಮೈ ಕೈನೋವು, ತಲೆನೋವು, ವಾಕರಿಕೆ ಕಾಯಿಲೆಯ ಪ್ರಮುಖ ಲಕ್ಷಣ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇದ್ದು, ಕಾಯಿಲೆ ಸಂಪೂರ್ಣ ವಾಸಿಯಾಗುತ್ತದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ನಿರಂತರ ಜ್ವರ ಇರಲಿ, ಮುಂಜಾಗ್ರತಾ ದೃಷ್ಟಿಯಿಂದ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದರು.
ಅನಾಫೀಸ್ ಸೊಳ್ಳೆಗಳು ಶುದ್ಧವಾದ ನೀರಿನಲ್ಲಿ ಬೆಳವಣಿಗೆಯಾಗುತ್ತವೆ. ಸೊಳ್ಳೆ ಕಚ್ಚಿದ 4ರಿಂದ 7 ದಿನದೊಳಗೆ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಮನೆಯ ಸುತ್ತಲು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ಮನೆ ಕಿಟಕಿಗಳಿಗೆ ಸೊಳ್ಳೆ ನಿರೋಧಕ ಜಾಲರಿ ಅಳವಡಿಸುವಿಕೆ, ಮಲಗುವಾಗ ಸೊಳ್ಳೆ ಪರದೆ ಉಪಯೋಗಿಸುವಿಕೆ ಸೇರಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ರುದ್ರಮೂರ್ತಿ, ಜಿಲ್ಲಾ ಅರೋಗ್ಯ ಶಿಕ್ಷಣಾಕಾರಿ ಜಿ.ಹರೀಶ್ ಮತ್ತಿತರರು ಇದ್ದರು.
ಪ್ರಮುಖ ರಸ್ತೆಗಳಲ್ಲಿ ಜಾಥಾ: ನವೀನ ವಿಧಾನಗಳನ್ನು ಬಳಸೋಣ, ಮಲೇರಿಯಾ ಕಡಿಮೆ ಮಾಡಿ ಜೀವ ಉಳಿಸೋಣ ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ನಸಿರ್ಂಗ್ ವಿದ್ಯಾರ್ಥಿನಿಯರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾಸ್ಪತ್ರೆಯ ಆವರಣದಿಂದ ಬಿ.ಬಿ.ರಸ್ತೆಯ ಮೂಲಕ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನವರೆಗೆ ಮಲೇರಿಯಾ ನಿಯಂತ್ರಣ ಜಾಗೃತಿ ಮಾಹಿತಿಯುಳ್ಳ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಘೋಷಣೆಯಲ್ಲಿ ಸಾಗಿದರು.