

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳದ ಹಲವು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಶೇ.60 ರಷ್ಟು ಕಾಫಿ ಹಾಳಾಗಿದ್ದು, ಅತಿವೃಷ್ಟಿ ಹಾನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ಗ್ರೋವರ್ಸ್ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಎಚ್.ಟಿ.ಮೋಹನ್ ಕುಮಾರ್ ಒತ್ತಾಯಿಸಿದರು.
ನಷ್ಟವಾಗಿರುವ ಕಾಫಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಈಗಾಗಲೇ ಸಿಎಂ ಅವರಿಗೆ ಪತ್ರ ಬರೆಯಲಾಗಿದೆ. ಇದಕ್ಕೆ ಯಾವುದೇ ಉತ್ತರ ಬಂದಿಲ್ಲ. 2 ದಿನಗಳ ನಂತರ ಸಿಎಂ ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ವಸ್ತು ಸ್ಥಿತಿ ಮನವರಿಕೆ ಮಾಡಲಾಗುವುದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೆಚ್ಚು ಮಳೆ ಕಾಫಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಮರಗಳು ಕುಸಿದಿವೆ. ಕಾಫಿ ಕೊಳೆತು ಉದುರಲಾರಂಭಿಸಿದೆ. ಕೆಲವು ಕಡೆ ದಿನಕ್ಕೆ 7 ಇಂಚು ಮಳೆಯಾಗುತ್ತಿದೆ. ಈಗ ಮಳೆ ನಿಂತಿದ್ದರೂ ಹಾನಿ ನಿಂತಿಲ್ಲ. ಕಾಫಿ ಉಪ ಬೆಳೆ ಮೆಣಸು ಸಹ ಹಾಳಾಗುತ್ತಿದೆ. ಮಳೆ ಜೋರಾಗಿರುವ ಕಾರಣ ಔಷಧಿ ಸಿಂಪಡಿಸಲು ಆಗುತ್ತಿಲ್ಲ ಎಂದರು.
ಇಂಥ ಪರಿಸ್ಥಿತಿಯಲ್ಲಿ ಮಳೆ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಈಗಾಗಲೇ ನೂರಾರು ಕೋಟಿ ಮೊತ್ತದ ಕಾಫಿ ಹಾಳಾಗಿದೆ. ಹೀಗಾಗಿ ಒಂದು ಹೆಕ್ಟೇರ್‌ಗೆ ಕೇಂದ್ರ ನೀಡುತ್ತಿರುವ 18 ಸಾವಿರ ಬದಲಿಗೆ 50 ಸಾವಿರ, ರಾಜ್ಯ ಸರ್ಕಾರ 10 ಸಾವಿರ ಬದಲು 50 ಸಾವಿರ ನೀಡಬೇಕು. ಈ ಬಾರಿ ಪ್ರಕೃತಿ ವಿಕೋಪ ನಷ್ಟವಾಗಿರುವುದರಿಂದ ಈವರೆಗೆ ಕೇವಲ 2 ಹೆಕ್ಟೇರ್ ವರೆಗೆ ಮಾತ್ರ ಪರಿಹಾರ ನೀಡಲಾಗುತ್ತಿತ್ತು. ಈಗ ಅದನ್ನು 10 ಹೆಕ್ಟೇರ್‌ಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ಕಾಫಿಗೆ ಕಾಡಾನೆ ಕಾಟವೂ ಕಂಠಕವಾಗಿ ಪರಿಣಮಿಸಿದೆ. ಇದನ್ನು ನಿಯಂತ್ರಿಸಿ ಎಂದು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಸುಮಾರು 800-1000 ಕೋಟಿ ನಷ್ಟವಾಗಿದೆ. ಮಳೆ ಆತಂಕ ಮತ್ತಷ್ಟು ಹೆಚ್ಚಾಗಿರುವುದರಿಂದ ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖೆಯವರು ಸರ್ವೆ ನಡೆಸಿ ನಿಖರ ಅಂಕಿ ಅಂಶ ನೀಡಬೇಕು ಮನವಿ ಮಾಡಿದರು.
ಉಪಾಧ್ಯಕ್ಷ ಬಿ.ಎಂ.ನಾಗರಾಜ್ ಮಾತನಾಡಿ, ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಸುಮಾರು 10-11 ಹೆಕ್ಟೇರ್ ಪ್ರದೇಶದಲ್ಲಿ ತೆಂಗಿ ಬೆಳೆಯಲಾಗಿದೆ. ಕರ್ನಾಟಕದಲ್ಲಿ ಸುಮಾರು 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಇದೆ ಎಂದು ಹೇಳಿದರು. ಇತ್ತೀಚೆಗೆ ಸಕಲೇಶಪುರಕ್ಕೆ ಬಂದಿದ್ದ ಅರಣ್ಯ ಸಚಿವರು, ಕೇಂದ್ರಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಸಮಸ್ಯೆಯ ಆಳ ಅಗಲದ ಬಗ್ಗೆ ವಿವರಿಸಲಾಗಿದೆ. ಆದರೂ ರಸ್ತೆಯಲ್ಲಿ ಬಂದು ಹಾಗೆಯೇ ಹೋದರು ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ, ನಿರ್ದೇಶಕ ಬಿ.ಜಿ.ಪ್ರಕಾಶ್ ಇದ್ದರು.