ಮಲೆನಾಡಿನಲ್ಲಿ ಧಾರಾಕಾರ ಮಳೆ ಹೇಮೆಗೆ ಒಳಹರಿವು ಹೆಚ್ಚಳ

1
Published on

ಹಾಸನ: ಮಲೆನಾಡು ಭಾಗವಾದ ಸಕಲೇಶಪುರ ಹಾಗು ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಜೀವ ನದಿ ಹೇಮಾವತಿ ಜಲಾಶಯಕ್ಕೆ ಜಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಮಂಗಳವಾರ ಜಲಾಶಯಕ್ಕೆ 14,027 ಕ್ಯೂಸೆಕ್ ಒಳ ಹರಿವು ಬರುತ್ತಿದೆ. 2,922 ಅಡಿ (37.103 ಟಿಎಂಸಿ) ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 2906.10 ಅಡಿ (23.838 ಟಿಎಂಸಿ) ನೀರು ಸಂಗ್ರಹವಾಗಿದೆ. ಜಲಾಶಯದಿಂದ 250 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇನ್ನು ಹೇಮೆಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್ ಕ್ರಮೇಣ ನೀರಿನಲ್ಲಿ ಮುಳುಗುತ್ತಿದೆ. ಅಲ್ಲದೇ ನದಿ ಪಾತ್ರದ ಭೂಪ್ರದೇಶದಲ್ಲಿ ನೀರು ಆವರಿಸಿಕೊಳ್ಳುತ್ತಿದೆ. ಸಕಲೇಶಪುರ ಪಟ್ಟಣದ ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನದ ಸಮೀಪಕ್ಕೂ ಹೇಮಾವತಿ ನದಿ ನೀರು ಚಾಚಿಕೊಂಡಿದೆ.
ಅದೇ ರೀತಿ ಬೇಲೂರು ತಾಲ್ಲೂಕಿನಲ್ಲಿರುವ ಯಗಚಿ ಜಲಾಶಯವು 3164.90 ಅಡಿ (3.603 ಟಿಎಂಸಿ) ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಮಂಗಳವಾರ 3155.83 ಅಡಿ (2.258 ಟಿಎಂಸಿ) ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 2864 ಕ್ಯೂಸೆಕ್ ಒಳಹರಿವು ಬರುತ್ತಿದೆ.
ಆಲೂರು ತಾಲ್ಲೂಕಿನಲ್ಲಿರುವ ವಾಟೆಹೊಳೆ ಜಲಾಶಯವು 3169.61 ಅಡಿ (1.51 ಟಿಎಂಸಿ) ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 3152.38 ಅಡಿ (0.701 ಟಿಎಂಸಿ) ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 680 ಕ್ಯೂಸೆಕ್ ಒಳಹರಿವು ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net