

ಶೃಂಗೇರಿ: ದಸರಾ ಕಳೆಯುತ್ತಿದ್ದಂತೆ ಮಲೆನಾಡಿನ ರೈತರಿಗೆ ಭೂಮಿ ಹುಣ್ಣಿಮೆ ಹಬ್ಬದ ಸಂಭ್ರಮ. ಭೂಮಿ ಹುಣ್ಣಿಮೆ ನಂತರದ ಅಮವಾಸ್ಯೆಯಲ್ಲಿ ದೀಪಾವಳಿ ಹಬ್ಬ ಆಚರಣೆ ಇರುತ್ತದೆ. ಈ ವರ್ಷ ಅ.ರಂದು ಭೂಮಿ ಹುಣ್ಣಿಮೆ ಹಬ್ಬ ಆಚರಣೆಗೆ ಕೃಷಿಕರು ತಯಾರಿ ನಡೆಸುತ್ತಿದ್ದಾರೆ.
ಮಲೆನಾಡಿನ ಕೃಷಿ ಸಂಪ್ರದಾಯದಲ್ಲಿ ಭೂಮಿ ಹುಣ್ಣಿಮೆಗೆ ವಿಶಿಷ್ಟ ಸ್ಥಾನವಿದೆ. ಭೂಮಿ ಹುಣ್ಣಿಮೆ ದಿನ ಸಗಣಿಉಂಡೆ ಮಾಡಿ ಅದಕ್ಕೆ ಹಾಲು ಎರೆದು, ಹೂ ಏರಿಸಿ, ಅರಿಶಿಣ ಕುಂಕುಮ, ವೀಳ್ಯದೆಲೆ, ಅಡಕೆ, ಹಣ್ಣುಗಳನ್ನು ಇರಿ ಗಣೇಶನನ್ನು ತಯಾರಿಸಿ ಪೂಜೆ ಸಲ್ಲಿಸುತ್ತಾರೆ. ಇದು ಭೂಮಿಗೆ ಬೈಕೆ ಹಾಕುವ ಹಬ್ಬ. ಬೆಳಗಿನ ಜಾವ ಸಾಗುವಳಿ ಜಮೀನಿನಲ್ಲಿ ಎಡೆ ಇಟ್ಟು ಪೂಜೆ ಮಾಡುತ್ತಾರೆ. ಭೂಮಿ ಹುಣ್ಣಿಮೆ ದಿನ ಭೂಮಿ ತಾಯಿ ಬೆಳೆಗಳನ್ನು ನೋಡಿಕೊಳ್ಳುತ್ತಾಳೆ. ಜತೆಗೆ ಪ್ರಸ್ತುತ ಭತ್ತದ ಬೆಳೆಯ ಕದಿರು (ತೆನೆ)ಹೊರಬರಲು ಸಿದ್ಧವಾಗಿರುತ್ತದೆ. ಹಾಗಾಗಿ ಭೂಮಿಗೆ ಬೈಕೆ ಹಾಕುವುದು ಸಂಪ್ರದಾಯ. ಹಕ್ಕಿಗಳು ಕೂಗುವ ಮೊದಲು ಪೂಜೆ ನೆರವೇರಬೇಕು. ಚೀನಿಕಾಯಿ ಕಡಬು ಬಿಟ್ಟು ಉಳಿದ ಎಲ್ಲ ಆಹಾರ ಪದಾರ್ಥಗಳನ್ನು ಭೂಮಿಯಲ್ಲಿ ಹೂಳಲಾಗುತ್ತದೆ. ಚೀನಿಕಾಯಿ ಭೂತಾಯಿಗೆ ನಂಜಾಗುತ್ತದೆ. ಪೂಜೆ ಮುಗಿದ ಮುರುದಿನ ಭೂಮಿಯಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ. ಭೂಮಿ ಬಲಿಯುತ್ತದೆ ಎಂಬುದು ಹಿರಿಯರ ನಂಬಿಕೆ.
ಅಚ್ಚ ಅಂಬಲಿ, ಹಾಲು ಅಂಬಲಿ, ಬಣ್ಣದ ಸೌತೆಕಾಯಿ, ಬೇಲಿ ಮೇಲಿನ ದಾರೆ, ಹೀರೆಕಾಯಿ ನೂರ ಒಂದು ಕುಡಿ ಭೂಮಿತಾಯಿಗೆ ಬೈಕೆ ಬೈಕೆ ಎಂದು ಭಕ್ತಿಯಿಂದ ಹಾಡುತ್ತ ರೈತರು ಬೆಳಗಿನಜಾವ ಭೂತಾಯಿಗೆ ಪೂಜೆ ಸಲ್ಲಿಸುತ್ತಾರೆ.
ಭೂಮಿ ಹುಣ್ಣಿಮೆಯ ಹಿಂದಿನ ದಿನ ಭೂಮಿ ಪೂಜೆಗಾಗಿ ಭರ್ಜರಿ ತಯಾರಿಯಲ್ಲಿ ಕೃಷಿಕರು ತೊಡಗುತ್ತಾರೆ. ಸಾಗುವಳಿ ಜಮೀನಿನ ಸಮೀಪ ಪೂಜೆ ಮಾಡಲು ಸ್ಥಳ ಮಟ್ಟಮಾಡಿ, ಸಗಣಿ ಸಾರಿಸಿ, ಎರಡು ಬಾಳೆಕಂಬಗಳು, ಮಾವಿನಸೊಪ್ಪಿನ ತೋರಣ ಹಾಗೂ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿ ಪುಟ್ಟ ಮಂಟಪ ಮಾಡಲಾಗುತ್ತದೆ. ಬೆಳಗಿನಜಾವ ಗದ್ದೆಗೆ ಪೂಜಿಸಲು ಬೇಕಾಗುವ ತೆಂಗಿನಕಾಯಿ, ಹೂಗಳು, ಅರಶಿಣ ಕುಂಕುಮ, ಹಾಲು ಮುಂತಾದ ಪೂಜಾ ಸಾಮಗ್ರಿಗಳನ್ನು ಜಮೀನಿನ ಬಳಿ ಇರಿಸಿ ಶಂಖನಾದ, ಜಾಗಟೆ, ಪಟಾಕಿ ಸಿಡಿಸಿ ಪೂಜೆ ನೆರವೇರಿಸಲಾಗುತ್ತದೆ. ನೂರಾಒಂದು ಜಾತಿಯ ಮರಗಿಡಗಳ ಸೊಪ್ಪಿನ ಪಲ್ಯ, ಬೆಲ್ಲ ಹಾಕಿ ಗೆಣಸು ಬೇಯಿಸಿ ತಯಾರಿಸಿದ ಸಿಹಿಪದಾರ್ಥ, ಪಾಯಸ, ಬಣ್ಣದ ಸೌತೆಕಾಯಿ ಪಲ್ಯ, ಚೀನಿಕಾಯಿ, ಸೋರೆಕಾಯಿ ಕಡಬು, ಸಾರು, ಅನ್ನ ಹೀಗೆ ವಿಶೇಷವಾಗಿ ತಯಾರಿಸಿದ ಅಡುಗೆಯನ್ನು ಸಾಗುವಳಿ ಗದ್ದೆಯ ಸಮೀಪವಿರಿಸಿ ಉತ್ತಮ ಸಲು ನೀಡಿ ನಮ್ಮನ್ನು ಕಾಪಾಡು ತಾಯಿ ಎಂದು ಕುಟುಂಬಸ್ಥರು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾರೆ. ಮನೆಮಂದಿಗಾಗಿ ವಿಶೇಷ ಅಡುಗೆ ಮಾಡುತ್ತಾರೆ. ಕೃಷಿ ಚಟುವಟಿಕೆ ಮತ್ತು ನಿಸರ್ಗಕ್ಕೆ ಪೂಜನೀಯ ಸ್ಥಾನ ನೀಡಿವ ಮಲೆನಾಡಿಗರು ಆಧುನಿಕತೆಯ ಅಬ್ಬರದ ನಡುವೆ ಭೂಮಿಪೂಜೆ ಸಂಪ್ರದಾಯ ಮುಂದುವರಿಸುತ್ತಿದ್ದಾರೆ.