

ಶಿವಮೊಗ್ಗ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೋಂಕು ಪತ್ತೆಯಾದ ಎಂಟು ಜನರಲ್ಲಿ ನಾಲ್ವರಲ್ಲಿ ಸೋಂಕು ಸಂಪೂರ್ಣ ನಿವಾರಣೆಯಾಗಿದ್ದು, ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾದರು. ಈ ತಂಡದ ಇನ್ನೂ ನಾಲ್ಕು ಜನ ಕೂಡ ನಾಲ್ಕೈದು ದಿನಗಳಲ್ಲಿ ಬಿಡುಗಡೆಯಾಗಲಿದ್ದಾರೆ.
65 ವರ್ಷದ ಇಬ್ಬರು ವೃದ್ಧರು (ಪಿ.808 ಮತ್ತು ಪಿ.809), 25 ವರ್ಷ (ಪಿ. 813) ಮತ್ತು 20 ವರ್ಷದ ಯುವಕರು (ಪಿ. 815) ಕರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಮೆಗ್ಗಾನ್ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿ ಸಮ್ಮಖದಲ್ಲಿ ಆಂಬುಲೆನ್ಸ್ ಮೂಲಕ ಮನೆಗಳಿಗೆ ಕಳಿಸಲಾಯಿತು.
ಗುಣಮುಖರಾಗಿದ್ದರೂ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿ ಇರಲು ಅವರಿಗೆ ಸೂಚನೆ ನೀಡಲಾಗಿದೆ.
ಮೇ 9ರಂದು ಅಹಮದಾಬಾದ್ನಿಂದ ಬಂದಿದ್ದ 9 ಜನರಲ್ಲಿ 8 ಮಂದಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಆಗ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ ಸೋಂಕಿತರನ್ನು ಮೆಗ್ಗಾನ್ ಆಸ್ಪತ್ರೆ ಐಸೊಲೆಟೆಡ್ ವಾರ್ಡ್ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಶನಿವಾರ ಮತ್ತು ಭಾನುವಾರ ಎರಡು ಬಾರಿ ಸ್ವಾಬ್ ಪರೀಕ್ಷೆಯಲ್ಲಿ ನಾಲ್ವರ ಗಂಟಲು ದ್ರವದ ವರದಿ ನೆಗೆಟಿವ್ ಬಂದ ಕಾರಣ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಶುಕ್ರವಾರ ಮತ್ತೆ ನಾಲ್ವರು ಬಿಡುಗಡೆ? 8 ಜನ ಸೋಂಕಿತರಲ್ಲಿ ನಾಲ್ವರಿಗೆ 24 ಗಂಟೆಗಳ ಅವಧಿಯಲ್ಲಿ ಎರಡು ಬಾರಿಯೂ ಲ್ಯಾಬ್ ರಿಪೋರ್ಟ್ ನೆಗೆಟಿವ್ ಬಂದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿದ್ದು, ಉಳಿದ ನಾಲ್ವರ ವರದಿಯಲ್ಲಿ ಕರೊನಾ ಸೋಂಕು ಸಂಪೂರ್ಣವಾಗಿ ನಿವಾರಣೆ ಆಗದಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಶಿಕಾರಿಪುರದ 18 ವರ್ಷದ ಯುವಕ (ಪಿ.810), 56 ವರ್ಷದ ವ್ಯಕ್ತಿ (ಪಿ.811), 43 ವರ್ಷದ ವ್ಯಕ್ತಿ (ಪಿ.812) ಹಾಗೂ ತೀರ್ಥಹಳ್ಳಿ ತಾಲೂಕು ಕೋಣಂದೂರಿನ 27 ವರ್ಷದ ಯುವಕ(ಪಿ.814)ನಿಗೆ ಚಿಕಿತ್ಸೆ ಮುಂದುವರಿದಿದೆ. ನಾಲ್ವರಿಗೆ ಮುಂದಿನ 3 ದಿನದಲ್ಲಿ 2 ಬಾರಿ ಸ್ವಾಬ್ ಟೆಸ್ಟ್ ಮಾಡಿ ವರದಿ ನೆಗೆಟಿವ್ ಬಂದರೆ ಶುಕ್ರವಾರ ಬಿಡುಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಪ್ರತಿ 4 ದಿನಕ್ಕೊಮ್ಮೆ ಪರೀಕ್ಷೆ: ಅಹಮದಾಬಾದ್ನಿಂದ ಬಂದಿದ್ದ 8 ಮಂದಿಗೂ ಪ್ರತಿ 4 ದಿನಕ್ಕೊಮ್ಮೆ ಸ್ವಾಬ್ ಟೆಸ್ಟ್ ನಡೆಸಲಾಗಿದೆ. ಸೋಮವಾರ ಬಿಡುಗಡೆಗೊಂಡ 25 ವರ್ಷದ ಯುವಕನಲ್ಲಿ ಐಸೋಲೆಟೆಡ್ನ ಕೊನೇ ದಿನಗಳಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆದರೆ ಆತ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ ಕಾರಣಕ್ಕೆ ಕರೊನಾ ಸೋಂಕು ನಿವಾರಣೆ ಆಯಿತು. ಇನ್ನುಳಿದ ಮೂವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಲಿಲ್ಲ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರು.
ಜಿಲ್ಲಾಡಳಿತದಿಂದ ಸರಳ ಬೀಳ್ಕೊಡುಗೆ: ಕರೊನಾದಿಂದ ಗುಣ ಮುಖರಾದವರನ್ನು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಸರಳವಾಗಿ ಬೀಳ್ಕೊಡಲಾಯಿತು. ಯಾವುದೇ ಪ್ರಚಾರ, ಆಡಂಬರ ಇಲ್ಲದೆ ಸರಳವಾಗಿ ಸಾಮಾನ್ಯ ರೋಗಿಗಳಂತೆ ಮನೆಗೆ ಕಳಿಸಿಕೊಟ್ಟರು.
ಇನ್ನೂ 14 ದಿನ ನಿತ್ಯ ತಪಾಸಣೆ: ಆಸ್ಪತ್ರೆಯಿಂದ ಬಿಡುಗಡೆಗೊಂಡ ನಾಲ್ವರನ್ನು ಮನೆಗಳಿಗೆ ಕಳುಹಿಸಿದ್ದು, ಕಡ್ಡಾಯವಾಗಿ 14 ದಿನ ಹೋಮ್ ಕ್ವಾರಂಟೈನ್ ಮಾಡಬೇಕು. ಮನೆಯಿಂದ ಹೊರ ಹೋಗದಂತೆ, ಕುಟುಂಬ ಸದಸ್ಯರೊಂದಿಗೂ ಬೆರೆಯದಂತೆ ಸೂಚಿಸಲಾಗಿದೆ. ಅಲ್ಲದೆ, ತಾಲೂಕು ವೈದ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿದಿನ ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಲಿದ್ದಾರೆ.
ವೈದ್ಯರ ಕಾರ್ಯಕ್ಕೆ ಮೆಚ್ಚುಗೆ: ಸೋಂಕಿತರಿಗೆ 14 ದಿನ ನಿರಂತರವಾಗಿ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿಸಿದ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಗಳನ್ನು ಕೆಲ ಮುಸ್ಲಿಂ ಸಂಘಟನೆಗಳು ಅಭಿನಂದಿಸಿದವು. ಮಹಾಮಾರಿ ಕರೊನಾ ಸೋಂಕಿಗೆ ಒಳಗಾಗಿದ್ದರೂ ಆತಂಕಗೊಳ್ಳದೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಂಘಟನೆಯ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದರು. ಡಿಎಚ್ಒ ಡಾ. ರಾಜೇಶ್ ಸುರಗೀಹಳ್ಳಿ, ಸಿಮ್್ಸ ನಿರ್ದೇಶಕ ಡಾ. ಕೆ.ಗುರುಪಾದಪ್ಪ, ಮೆಗ್ಗಾನ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಆರ್.ರಘುನಂದನ್, ಇಎನ್ಟಿ ವಿಭಾಗದ ಮುಖ್ಯಸ್ಥ ಡಾ. ಗಂಗಾಧರ್, ವೈದ್ಯಕೀಯ ಅಧೀಕ್ಷಕ ಡಾ. ವಿರುಪಾಕ್ಷಪ್ಪ, ಅನಸೂಯಾ ಮತ್ತಿತರರು ಅಭಿನಂದನೆ ಸ್ವೀಕರಿಸಿದರು.
ವೃದ್ಧ ಬಿಡುಗಡೆ, ಯುವಕ ಒಳಗಡೆ: 9 ಜನ ಗುಜರಾತ್ನಿಂದ ಮೇ 9ರಂದು ಜಿಲ್ಲೆಗೆ ಮರಳಿದ್ದರು. ಅದರಲ್ಲಿ 8 ಜನರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿತ್ತು. ಸೋಂಕು ಇಲ್ಲದ ಮತ್ತೊಬ್ಬ ವ್ಯಕ್ತಿಯನ್ನು ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಆತನಿಗೆ ಭಾನುವಾರ ಬಿಡುಗಡೆಗೊಂಡ ಬುಲೆಟಿನ್ನಲ್ಲಿ ಪಿ.808ರ ಸಂಪರ್ಕದಿಂದ ಕರೊನಾ ಸೋಂಕು ದೃಢಪಟ್ಟಿದೆ. ವಿಚಿತ್ರವೆಂದರೆ ಪಿ.808 ರೋಗಿ ಸೋಮವಾರ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡರೆ, ಅತ್ತ ಅದೇ ಪಿ.808 ರೋಗಿಯ ಸಂಪರ್ಕದಿಂದ 31 ವರ್ಷದ ಯುವಕ (ಪಿ.2087) ಭಾನುವಾರ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುರಕ್ಷಿತವಾಗಿ ಮನೆ ತಲುಪಿದ ನಾಲ್ವರು: ಕರೊನಾ ಸೋಂಕಿನಿಂದ ಗುಣಮುಖರಾದ ನಾಲ್ಕು ಮಂದಿ ಶಿವಮೊಗ್ಗದಿಂದ ಪಟ್ಟಣಕ್ಕೆ ಸೋಮವಾರ ಆಂಬುಲೆನ್ಸ್ನಲ್ಲಿ ಆಗಮಿಸಿದ್ದು ಅವರನ್ನು ಮನೆಗಳಿಗೆ ಕಳುಹಿಸಿಕೊಡಲಾಯಿತು. ನಾಲ್ವರ ಪೈಕಿ ಇಬ್ಬರು ಶಿಕಾರಿಪುರದ ನಿವಾಸಿಗಳು, ಇನ್ನಿಬ್ಬರು ಹಳ್ಳಿಯವರು. ಹಳ್ಳಿಯವರ ಜತೆ ಪೊಲೀಸ್ ಸಿಬ್ಬಂದಿ ಕಳುಹಿಸಿ ಅವರನ್ನು ಮನೆಗೆ ತಲುಪಿಸಲಾಯಿತು. ಗುಣಮುಖರಾಗಿ ಮನೆಗೆ ಬಂದ ನಾಲ್ವರನ್ನೂ ಸುರಕ್ಷಿತವಾಗಿ ಮನೆಗೆ ತಲುಪಿಸಲಾಗಿದೆ.
ಜಿಲ್ಲಾಡಳಿತದ ಆದೇಶದ ಮೇರೆಗೆ 14 ದಿನಗಳ ಹೋಮ್ ಕ್ವಾರಂಟೈನ್ ಇವರನ್ನು ಒಳಪಡಿಸಿದ್ದು ಗ್ರಾಪಂ ಟಾಸ್ಕ್ಫೋರ್ಸ್ ಮತ್ತು ಟೌನ್ ಟಾಸ್ಕ್ ಫೋರ್ಸ್ ಸದಸ್ಯರು ಪ್ರತಿ ದಿನ ನಾಲ್ಕು ಬಾರಿ ಭೇಟಿ ನೀಡಿ ಅವರು ಮನೆಯಲ್ಲಿ ಇರುವುದನ್ನು ಜಿಲ್ಲಾಡಳಿತದ ಗಮನಕ್ಕೆ ಆಪ್ ಮೂಲಕ ತರಬೇಕು ಎಂದು ತಹಸೀಲ್ದಾರ್ ಎಂ.ಪಿ.ಕವಿರಾಜ್ ಹೇಳಿದರು. ಟಿಎಚ್ಒ ಡಾ. ಚಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಪಟ್ಟಣ ಠಾಣೆ ಸಬ್ ಇನ್ಸ್ಪೆಕ್ಟರ್ ರಾಜುರೆಡ್ಡಿ ಇತರರಿದ್ದರು.