ಮಲೆ ಮಹದೇಶ್ವರರ ಚಿಂತನೆ ಯುವಜನಾಂಗಕ್ಕೆ ತಲುಪಲಿ

Published on

ಮೈಸೂರು: ಲೋಕ ಕಲ್ಯಾಣ ಮತ್ತು ಶಾಂತಿ ಸ್ಥಾಪನೆಯ ಉದ್ದೇಶ ಹೊಂದಿದ್ದ ಮಲೆ ಮಹದೇಶ್ವರರ ಚಿಂತನೆಗಳನ್ನು ಯುವಜನಾಂಗಕ್ಕೆ ತಲುಪಿಸಬೇಕು ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಡಿ.ಮಾದೇಗೌಡ ಅಭಿಪ್ರಾಯಪಟ್ಟರು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನ ಕನ್ನಡ ವಿಭಾಗದಿಂದ ಮಹಾರಾಣಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಗೌಡರ ಸಿದ್ದಪ್ಪ ಮತ್ತು ಶರಣೆ ಮರಮ್ಮನವರ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಗತ್ತಿನಲ್ಲಿ ಅನೇಕ ಸುಪ್ರಸಿದ್ಧ ಪ್ರವಾಸಿ ತಾಣಗಳನ್ನು ಗಮನಿಸಬಹುದು. ಆದರೆ ಮಲೆ ಮಹದೇಶ್ವರರು ಸುತ್ತಾಡಿದ ಪುಣ್ಯಭೂಮಿಯು ಪ್ರಕೃತಿಯಿಂದ ಸಂಪದ್ಭರಿತವಾದುದು. ಆದ್ದರಿಂದ ಇದು ನಿಜಾರ್ಥದಲ್ಲಿ ಬ್ರಹ್ಮಾಂಡವಾಗಿದೆ ಎಂದು ಬಣ್ಣಿಸಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ 77 ಬೆಟ್ಟಗಳ ಸಾಲನ್ನು ಕಾಣಬಹುದು. 800 ವರ್ಷಗಳ ಹಿಂದೆ ಮಹದೇಶ್ವರರು ಬಂದಾಗ ಇದು ಕತ್ತಲ ರಾಜ್ಯವಾಗಿತ್ತು. ಐದು ದಟ್ಟಾರಣ್ಯಗಳನ್ನು ಹೊಂದಿರುವ ಮೈಸೂರು ಸೀಮೆಯಾಗಿತ್ತು. ಅಲ್ಲದೆ ಕೋಟೆಯೊಳಗಡೆ ಮೈಸೂರು ಇತ್ತು. ಆದರೆ ಇಂದು ವಿಶಾಲವಾಗಿ ಬೆಳೆದು ಜಗದ್ವಿಖ್ಯಾತಿಯನ್ನು ಪಡೆದಿದೆ ಎಂದರು.
ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗದ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು ಅವರು ಮಹದೇಶ್ವರರ ಸಾಹಿತ್ಯಿಕ ನೆಲೆಗಳ ಹುಡುಕಾಟ ಕುರಿತು ದತ್ತಿ ಉಪನ್ಯಾಸ ನೀಡಿದರು.
ದತ್ತಿ ದಾನಿ ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ, ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಸೋಮಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಮೈಸೂರು ಕೃಷ್ಣಮೂರ್ತಿ, ಸಹಾಯಕ ಪ್ರಾಧ್ಯಾಪಕ ಎಂ.ಮಹಾಲಿಂಗ, ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಎಸ್. ಶಂಕರಪ್ಪ. ಪ್ರಾಧ್ಯಾಪಕ ಡಾ.ಕೆ.ಇ.ಗೋವಿಂದೇಗೌಡ, ಐಕ್ಯೂಎಸಿ ಸಂಚಾಲಕ ಡಾ.ಎಸ್.ಮಂಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net