ಕೊಳ್ಳೇಗಾಲ : ಅರಣ್ಯ ಸಿರಿಗೆ ಹೆಸರಾಗಿರುವ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಪಕ್ಷಿಗಳ ಸಂತತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವುಗಳ ನಿಖರ ಮಾಹಿತಿಗಾಗಿ ಪ್ರಪ್ರಥಮ ಬಾರಿಗೆ ಪಕ್ಷಿ ಗಣತಿ ಆರಂಭಗೊಂಡಿದೆ.
ಶನಿವಾರ ಪಕ್ಷಿ ಗಣತಿಗೆ ಚಾಲನೆ ದೊರೆತಿದ್ದು, 2 ದಿನಗಳ ಕಾಲ ನಡೆಯಲಿದೆ. ಹನೂರು ಹಾಗೂ ಕೊಳ್ಳೇಗಾಲ ತಾಲೂಕು ಸೇರಿದಂತೆ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ 7 ಅರಣ್ಯ ವಲಯಗಳಿವೆ. ಒಟ್ಟು 949.469 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಈ ವನ್ಯಧಾಮವು ಬೆಟ್ಟಗುಡ್ಡ ಪ್ರದೇಶದಿಂದ ಕೂಡಿದೆ. ಈ ವಿಭಾಗದಲ್ಲಿ ಅರೆ ಹರಿದ್ವರ್ಣ, ಶುಷ್ಕ ಅರಣ್ಯ, ಒಣ ಶುಷ್ಕ ಅರಣ್ಯ, ಕುರುಚಲು ಕಾಡುಗಳನ್ನು ಕಾಣಬಹುದಾಗಿದೆ.
ತೇಗ, ಬೀಟೆ, ಹೊನ್ನೆ, ಕರಾಚಿ, ಶ್ರೀಗಂಧ, ಕಾಡು ಬೇವು, ಅಲಪ್ಪಿ, ಎತ್ತಿಗೆ, ದಿಂಡಿಗ ಇನ್ನು ಮುಂತಾದ ಬೆಲೆ ಬಾಳುವ ಮರ ಮುಟ್ಟುಗಳನ್ನು ಹೇರಳವಾಗಿ ನೋಡಬಹುದು. ಪ್ರಮುಖವಾಗಿ ಆನೆ, ಹುಲಿ, ಚಿರತೆ, ಜಿಂಕೆ, ಕಡವೆ, ಕಾಡೆಮ್ಮೆ, ಕಾಡುಹಂದಿ, ಕರಡಿ, ನರಿ, ಸೀಳುನಾಯಿ ಇತ್ಯಾದಿ ವನ್ಯ ಜೀವಿಗಳಿವೆ. ಈ ವೈವಿಧ್ಯಮಯ ಅರಣ್ಯ ಪ್ರದೇಶದಲ್ಲಿ ಪಕ್ಷಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಪಕ್ಷಿ ಗಣತಿ ನಡೆಸಲಾಗುತ್ತಿದೆ.
ಪ್ರಥಮ ಬಾರಿಗೆ ’ಪಕ್ಷಿ ವೈವಿಧ್ಯತೆಯ ಸಮೀಕ್ಷೆ
ಮಲೆ ಮಹದೇಶ್ವರ ವನ್ಯಜೀವಿ ಧಾಮ ಅರಣ್ಯ ಪ್ರದೇಶ ಬೃಹತ್ ಬೌಗೋಳಿಕ ವಿಸ್ತೀರ್ಣ ಹೊಂದಿದೆ. ವಿಭಾಗದ ಅಜ್ಜೀಪುರ ಹಾಗೂ ಪಿ.ಜಿ.ಪಾಳ್ಯ ಅರಣ್ಯ ಪ್ರದೇಶದಲ್ಲಿ ಸಫಾರಿ ಜೋನ್ ಆರಂಭಗೊಂಡಿರುವುದು ವಿಶೇಷವಾಗಿದ್ದು. ಹುಲಿ, ಚಿರತೆ, ಕಾಡೆಮ್ಮೆ, ಕಡವೆ, ಜಿಂಕೆ, ಆನೆ ಇತ್ಯಾದಿ ಪ್ರಾಣಿಗಳು ಕಾಣಸಿಗುತ್ತಿರುವುದರಿಂದ ಪ್ರವಾಸೋದ್ಯಮ ಕೇಂದ್ರವಾಗಿದೆ. ವಿಶೇಷವಾಗಿ ವೈವಿಧ್ಯಮಯ ಪಕ್ಷಿ ಸಂಕುಲ ಗೋಚರಿಸುತ್ತಿದ್ದು. ಪ್ರಥಮ ಬಾರಿಗೆ ಪಕ್ಷಿ ಗಣತಿ ನಡೆಸಲಾಗುತ್ತಿದೆ. ಆಸಕ್ತ ಪಕ್ಷಿ ವೀಕ್ಷಕರು ಹಾಗೂ ಪಕ್ಷಿ ತಜ್ಞರು ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ರಣಹದ್ದು ಗೋಚರ: ಅರಣ್ಯ ಇಲಾಖೆ ಪಕ್ಷಿ ಗಣತಿಗೆ 4 ತಂಡಗಳ ರಚಿಸಿತ್ತು. ಮೊದಲ ದಿನದ ಪಕ್ಷಿ ಗಣತಿ ಪೂರ್ಣಗೊಂಡಿದೆ. ಭಾನುವಾರವೂ ಮುಂದುವರಿಯಲಿದೆ. ಈ ಬಗ್ಗೆ ಡಿಸಿ ಎಫ್ ಸಂತೋಷ್ ಕುಮಾರ್ ವಿಜಯವಾಣಿಗೆ ಪ್ರತಿಕ್ರಿಯಿಸಿ, ಗಣತಿಯಲ್ಲಿ 200ಕ್ಕೂ ಹೆಚ್ಚು ವಿವಿಧ ಪ್ರಭೇದಗಳು ಸಮೀಕ್ಷೆಯಲ್ಲಿ ದೊರೆೆತಿವೆ. ವಿಶೇಷವಾಗಿ ರಣಹದ್ದುಗಳು ದೊರೆತಿವೆ. ಗಣತಿ ಪೂರ್ಣಗೊಂಡ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.