ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಬುಧವಾರ ಬಸ್ ಸಮಸ್ಯೆಯಿಂದಾಗಿ ಭಕ್ತರು ಊರುಗಳಿಗೆ ಹಿಂತಿರುಗಲು ಬಸ್ ನಿಲ್ದಾಣದಲ್ಲಿ ಪರದಾಡಿದರು. ಗಂಟೆಗಟ್ಟಲೇ ಕಾದು ನಿಂತು ತೊಂದರೆ ಅನುಭವಿಸಿದರು.
ದೀಪಾವಳಿ ಜಾತ್ರೆ ಹಿನ್ನೆಲೆ ಮ. ಬೆಟ್ಟಕ್ಕೆ ಕಳೆದ ಒಂದು ವಾರದ ಹಿಂದೆಯೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸಿ ದೇವರ ದರ್ಶನ ಹಾಗೂ ವಿವಿಧ ಉತ್ಸವದ ಸೇವೆಗಳಲ್ಲಿ ಪಾಲ್ಗೊಂಡು ಶ್ರೀ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದರು. ಜತೆಗೆ ಜಾತ್ರೆ ಆರಂಭದ ದಿನದಿಂದಲೂ ಚಾ.ನಗರ ಸೇರಿದಂತೆ ಬೆಂಗಳೂರು, ಮೈಸೂರು, ಮಂಡ್ಯ, ಕನಕಪುರ, ಚನ್ನಪಟ್ಟಣ, ರಾಮನಗರ, ಇತರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಇವರಲ್ಲಿ ಕೆಲವರು ಊರಿಗೆ ಹಿಂತಿರುಗಿದ್ದರೆ, ಇನು ಕೆಲವರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಇಲ್ಲಿಯೇ ವಾಸ್ತವ್ಯ ಹೂಡಿದ್ದರು.
ಭಕ್ತರ ಸಂಖ್ಯೆಗೆ ತಕ್ಕಂತೆ ವಿವಿಧ ಘಟಕಗಳಿಂದ 350 ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿತ್ತು. ಆದರೆ ಬುಧವಾರ ಬೆಳಗ್ಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ರಥೋತ್ಸವದ ಬಳಿಕ ಬಹುತೇಕ ಭಕ್ತರು ಒಟ್ಟಿಗೆ ತಮ್ಮ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದರು. ಈ ಕಾರಣದಿಂದ ಊರುಗಳಿಗೆ ತೆರಳಲು ಬಸ್ ಕೊರತೆಯಿಂದಾಗಿ ಸಾವಿರಾರು ಭಕ್ತರು ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾದು ನಿಲ್ಲುವಂತಾಯಿತು. ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ನಿಲ್ಲಲು ಸಾಧ್ಯವಾಗದೇ ಆವರಣದಲ್ಲೇ ಕಾದು ಕುಳಿತು ತೊಂದರೆ ಅನುಭವಿಸಿದರು. ನಿಲ್ದಾಣಕ್ಕೆ ಆಗಮಿಸುತ್ತಿದ್ದ ಬಸ್‌ಗೆ ಹತ್ತಲು ಭಕ್ತರು ಮುಗಿಬಿದ್ದು ನೂಕುನುಗ್ಗಲಿನಲ್ಲಿ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅದರಲ್ಲೂ ಕೆಲ ಪುರುಷರು ಸೀಟ್ ಹಿಡಿಯಲು ಕಿಟಕಿಯ ಮೂಲಕ ಹರಸಾಹಸಪಟ್ಟು ಒಳನುಗ್ಗುತ್ತಿದ್ದರು. ಕೆಲ ಭಕ್ತರು ನಿಂತುಕೊಂಡೇ ಪ್ರಯಾಣ ಬೆಳೆಸಿದರು. ಇನ್ನು ಕೆಲವರು ಖಾಸಗಿ ಬಸ್‌ಗಳ ಮೊರೆ ಹೋದರು. ದೂರದ ಊರುಗಳಿಗೆ ನೇರವಾಗಿ ತೆರಳಲು ಬಸ್ ಕೊರತೆಯಿಂದಾಗಿ ಭಕ್ತರು ಇತರೆಡೆಗೆ ತೆರಳುವ ಬಸ್‌ಗಳನ್ನು ಅವಲಂಬಿಸಬೇಕಾಯಿತು. ಮಧ್ಯಾಹ್ನದ ತನಕ ಈ ಅವ್ಯವಸ್ಥೆ ಬಸ್ ನಿಲ್ದಾಣದಲ್ಲಿತ್ತು. ಕ್ರಮೇಣ ಕಡಿಮೆಯಾಯಿತು. ಇದರಿಂದ ಭಕ್ತರು ತಮ್ಮ ಊರುಗಳಿಗೆ ತೆರಳಲು ಪರದಾಡುವಂತಾಯಿತು.