

ಯಳಂದೂರು: ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಎಲ್ಲರೂ ಸಹಕರಿಸಬೇಕು. ಸ್ವಚ್ಛತೆ ನಮ್ಮ ಮನೆಯಿಂದಲೇ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಶ್ರಮದಾನ ಶಿಬಿರ ಮತ್ತು ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಸ್ವಚ್ಛವಾಗಿದ್ದರೆ ಇಡೀ ಭೂಮಿ ನಳನಳಿಸುತ್ತದೆ. ಈ ವಿಷಯದಲ್ಲಿ ನಾವು ನಮ್ಮ ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ನಮ್ಮ ಸುತ್ತಮುತ್ತಲಿನ ಇಡೀ ವಾತಾವರಣ ನಮ್ಮದು ಎಂಬ ಅರಿವು ಬೆಳೆಸಿಕೊಳ್ಳಬೇಕು. ಮಲಿನಮುಕ್ತ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಇದೇ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು, ಇದೊಂದು ಚಿಕ್ಕ ಆಸ್ಪತ್ರೆಯಾಗಿದ್ದು ಸುಸಜ್ಜಿತವಾಗಿಟ್ಟುಕೊಳ್ಳುವಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ವೈದ್ಯ ತಂಡವನ್ನು ಹೊಂದಿರುವ ಆಸ್ಪತ್ರೆ ಇದಾಗಿದೆ. ಆದರೆ ಸಿಬ್ಬಂದಿ ಕೊರತೆ ಇದ್ದು, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಅನಿವಾರ್ಯತೆ ಇದೆ ಎಂದರು.
ಆಸ್ಪತ್ರೆ ಆವರಣದ ಸುತ್ತಲೂ ಬೆಳೆದಿದ್ದ ಕಳೆ ಸಸ್ಯಗಳು, ಗಿಡಗಂಟಿ, ಪ್ಲಾಸ್ಟಿಕ್, ಪೇಪರ್ ತ್ಯಾಜ್ಯಗಳನ್ನು ಹೆಕ್ಕಿ ತೆಗೆಯಲಾಯಿತು. ನಂತರ ಆಸ್ಪತ್ರೆ ಮುಂಭಾಗ ಗಿಡಗಳನ್ನು ನೆಡಲಾಯಿತು.
ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಪ್ರಭಾವತಿ, ಸುಶೀಲಾ, ಬಿ. ರವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಶ್ವೇಶ್ವರಯ್ಯ, ತಾಲೂಕು ವೈದ್ಯಾಧಿಕಾರಿ ಡಾ.ಶ್ರೀಧರ್, ಡಾ.ನಾಗೇಂದ್ರಮೂರ್ತಿ, ಡಾ.ಶಶಿಕಲಾ, ಡಾ.ನಾಗೇಶ್, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ತಹಸೀಲ್ದಾರ್ ಜಯಪ್ರಕಾಶ್, ಬಿಇಒ ಕೆ.ಕಾಂತರಾಜು, ಸಮಾಜ ಕಲ್ಯಾಣಾಧಿಕಾರಿ ರಾಜೇಶ್, ಮುಖ್ಯಾಧಿಕಾರಿ ರವಿಕೀರ್ತಿ , ಜಗದೀಶ್, ಸೋಮಣ್ಣ, ರಂಗಜೋಳಿಗೆ ಮುಡಿಗುಂಡ ಮೂರ್ತಿ, ಈಶ್ವರಿ ವೆಂಕಟೇಶ್, ಕಮರವಾಡಿ ರೇವಣ್ಣ, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.