

ದೇವನಹಳ್ಳಿ: ಕೆಳವರ್ಗದ ಜನ ತಲೆಯ ಮೇಲೆ ಮಲ ಹೊರುವ ಪದ್ಧತಿಗೆ ನಿಷೇಧ ಹೇರಿದ ಕೀರ್ತಿ ಮಾಜಿ ಸಚಿವ ದಿ.ಬಿ.ಬಸವಲಿಂಗಪ್ಪ ಅವರಿಗೆ ಸಲ್ಲುತ್ತದೆ ಎಂದು ಡಿಎಸ್‌ಎಸ್ ರಾಜ್ಯ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಮಾಜಿ ಸಚಿವ ದಿ.ಬಿ.ಬಸವಲಿಂಗಪ್ಪ ಅವರ ಜನ್ಮ ಶತಮಾನೋತ್ಸವದಲ್ಲಿ ಮಾತನಾಡಿದ ಅವರು, ಇಂದು ಮನೆಮನೆಗೂ ಆಧುನಿಕ ಶೌಚಗೃಹಗಳಿದ್ದರೂ ಶೌಚಗುಂಡಿಗಳು ಭರ್ತಿಯಾದರೆ ವಾಹನದ ಮೂಲಕ ಖಾಲಿ ಮಾಡುವ ತಂತ್ರಜ್ಞಾನಕ್ಕೆ ನಾಂದಿಹಾಡಿದ ಕೀರ್ತಿ ಬಸವಲಿಂಗಪ್ಪ ಅವರಿಗೆ ಸಲ್ಲುತ್ತದೆ. ಬಿ.ಬಸವಲಿಂಗಪ್ಪ ಅವರು ಪೌರಾಡಳಿತ, ಅರಣ್ಯ ಸೇರಿ ಇಲಾಖೆಗಳ ಸಚಿವರಾಗಿ ಶಾಶ್ವತ ಕೆಲಸಗಳನ್ನು ಮಾಡಿದ್ದರು. ಬೂಸಾ ಚಳವಳಿಗೆ ಮೂಲ ಕಾರಣರಾಗಿ ಅದಕ್ಕಾಗಿ ಮಂತ್ರಿಗಿರಿಯನ್ನೇ ಕಳೆದುಕೊಂಡರು. ಆಗ ಜನ್ಮತಳೆದಿದ್ದೇ ದಲಿತ ಸಂಘರ್ಷ ಸಮಿತಿ. ಸಮುದಾಯಕ್ಕೆ ಸ್ವಚ್ಛತೆ ಹಾಗೂ ಶಿಸ್ತಿನ ಪಾಠ ಹೇಳಿಕೊಟ್ಟ ಬಸವಲಿಂಗಪ್ಪ ಅವರು ಇಂದಿರಾ ಗಾಂಧಿಯವರನ್ನೇ ಎದುರಿಸಿ, ನೇರಾನೇರವಾಗಿ ಮಾತನಾಡುತ್ತಿದ್ದರು. ಮುಖ್ಯಮಂತ್ರಿಯಾಗುವ ಎಲ್ಲ ಅವಕಾಶ, ಅರ್ಹತೆಗಳಿದ್ದರೂ ರಾಜಕೀಯ ವ್ಯವಸ್ಥೆ ಬಿಡಲಿಲ್ಲ. ಪಿಟಿಸಿಎಲ್, ಅಟ್ರಾಸಿಟಿ ಕಾಯ್ದೆಯ ಮೂಲ ಕಾರಣೀಕರ್ತರೂ ಆಗಿರುವ ಬಸವಲಿಂಗಪ್ಪ ಹಾಗೂ ಹೋರಾಟಗಾರ ಪ್ರೊ.ಬಿ.ಕೃಷ್ಣಪ್ಪ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿರಸಬೇಕು ಎಂದರು. ಹೊಸಕೋಟೆ ತಾಲೂಕು ಸಂಚಾಲಕ ಪಿ.ಎಂ.ಚಿನ್ನಸ್ವಾಮಿ ಮಾತನಾಡಿ, ಸರ್ಕಾರ ಕೊಟ್ಟ ಭೂಮಿಯನ್ನು ಇತರರು ವಂಚಿಸಿ ಕಸಿದುಕೊಂಡಿದ್ದರೆ ಅದನ್ನು ಮರಳಿ ಪಡೆದುಕೊಳ್ಳಲು ಪಿಟಿಸಿಎಲ್ ಕಾಯ್ದೆ ತಂದವರು ಬಸವಲಿಂಗಪ್ಪ ಅವರು ಎಂದರು. ತಾಲೂಕು ಸಂಘಟನಾ ಸಂಚಾಲಕ ಚನ್ನಕೃಷ್ಣ, ಕೊಯಿರಾ ನಾಗರಾಜ್, ರಾಜೇಶ್ ನಲ್ಲೂರು, ಯಲಿಯೂರು ಅಜಯ್, ವೆಂಕಟೇಶ್ ಹಾರೋಹಳ್ಳಿ, ಬಿಸ್ನಳ್ಳಿ ಮೂರ್ತಿ, ಲಕ್ಷ್ಮಣ ನಡವತ್ತಿ, ಕೊರಳೂರು ರಮೇಶ್, ಹಾರೋಹಳ್ಳಿ ಪ್ರಕಾಶ, ಕೆ.ಆರ್.ಮುನಿಯಪ್ಪ, ಶಿವಮೂರ್ತಿ, ನಾಗನಾಯಕನಹಳ್ಳಿ ರಮೇಶ್, ಅಶ್ವತ್ಥ ಅಂದೇನಹಳ್ಳಿ, ರವಿ ಭೂವನಹಳ್ಳಿ ಇದ್ದರು.