

ಎಂ.ಕೆ.ಹುಬ್ಬಳ್ಳಿ: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನೂತನ ಅಧ್ಯಕ್ಷರಾಗಿ ಮೋಹನ ಸಂಬರಗಿ ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು.
ಕಾರ್ಖಾನೆಯ ಕಚೇರಿಯಲ್ಲಿ ಕಾರ್ಖಾನೆ ಉಪಾಧ್ಯಕ್ಷರು, ನಿರ್ದೇಶಕರು, ರೈತರು, ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಬರಗಿ, ಕಾರ್ಖಾನೆ ಸಂಕಷ್ಟದಲ್ಲಿದೆ. ಅದನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರೈತರ, ಕಾರ್ಮಿಕರ, ನೌಕರರ ಸಹಕಾರದೊಂದಿಗೆ ಕಾರ್ಖಾನೆ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಕಿತ್ತೂರು ಮತ್ತು ಖಾನಾಪುರ ಶಾಸಕರು ಸಹಕಾರ ನೀಡಿದ್ದು, ಸರ್ಕಾರದ ಸಹಕಾರ ಪಡೆದು ಕಾರ್ಖಾನೆ ವಿಸ್ತರಣೆ ಮಾಡುವ ಉದ್ದೇಶ ಹೊಂದಿದ್ದೇವೆ. ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ. ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲ ದಿಗ್ದರ್ಶಕರಿಗೆ ಚಿರಋಣಿಯಾಗಿರುವೆ ಎಂದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಸಂಬರಗಿ ಅವರು ಕಾರ್ಖಾನೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವಿ. ಉತ್ತಮ ವ್ಯಕ್ತಿಯಾಗಿರುವ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕಾರ್ಖಾನೆ ಉಳಿಸಿ-ಬೆಳೆಸುವ ಜವಾಬ್ದಾರಿ ಅವರ ಮೇಲಿದೆ. ಸರ್ಕಾರದಿಂದ ಕಾರ್ಖಾನೆಗೆ ನೆರವು ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.
ಉಪಾಧ್ಯಕ್ಷೆ ಲಕ್ಷ್ಮೀ ಅರಳಿಕಟ್ಟಿ, ನಿರ್ದೇಶಕರಾದ ಲಕ್ಷ್ಮಣ ಎಮ್ಮಿ, ಶಂಕರಗೌಡ ಪಾಟೀಲ, ಮಂಜುನಾಥ ಪಾಟೀಲ, ಜ್ಯೋತಿಬಾ ಹೈಬತ್ತಿ, ಬಸವರಾಜ ಬೆಂಡಿಗೇರಿ, ಸಿದ್ದಪ್ಪ ದೂರಪ್ಪನವರ, ಅಶೋಕ ಬೆಂಡಿಗೇರಿ, ಬಸವರಾಜ ಪುಂಡಿ, ಭರತೇಶ ಶೇಬಣ್ಣವರ, ಸಂಜೀವ ಹುಬ್ಬಳೆಪ್ಪನವರ, ಸಾವಂತ ಕಿರಬನವರ, ಮೀನಾಕ್ಷಿ ನೆಲಗಳಿ ಇತರರು ಇದ್ದರು. ಚುನಾವಣಾಧಿಕಾರಿಯಾಗಿ ಎಂ.ಎನ್.ಮಾನಿ ಕಾರ್ಯನಿರ್ವಹಿಸಿದರು. ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ವೀರೇಶ ಹುಲಿಕಟ್ಟಿ ಹಾಗೂ ಸಿಬ್ಬಂದಿ ಇದ್ದರು.
ಇತ್ತೀಚೆಗೆ ನಿರ್ದೇಶಕರೊಬ್ಬರ ರಾಜೀನಾಮೆಯಿಂದ ವರ್ಷಗಳ ಹಿಂದೆ ತೆರವಾಗಿದ್ದ ನಿರ್ದೇಶಕ ಸ್ಥಾನಕ್ಕೆ ಈವರೆಗೆ ಚುನಾವಣೆ ನಡೆದಿರಲಿಲ್ಲ. ಆ ಸ್ಥಾನಕ್ಕೆಯೇ ಕಾರ್ಖಾನೆಯ ಎಲ್ಲ ನಿರ್ದೇಶಕರ ಸರ್ವಾನುಮತದ ನಿರ್ಣಯದೊಂದಿದೆ ಮೋಹನ ಸಂಬರಗಿ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಈಗ ಅವಿರೋಧವಾಗಿ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.