

ನರಗುಂದ: ಮಲಪ್ರಭಾ ಪ್ರವಾಹದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ತೋಟಗಾರಿಕೆ ಮತ್ತು ವಿವಿಧ ಕೃಷಿ ಬೆಳೆಗಳು ಹಾನಿಗೊಳಗಾಗಿವೆ. ಇದರಿಂದ ರೈತ ಸಮೂಹ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 21,395 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಕೃಷಿ ಬೆಳೆಗಳನ್ನು ರೈತರು ಬೆಳೆದಿದ್ದರು. ಅದರಲ್ಲಿ 1,049 ಹೆಕ್ಟೇರ್ ಹೆಸರು, 1,014 ಹೆಕ್ಟೇರ್ ಗೋವಿನಜೋಳ, 993 ಹೆಕ್ಟೇರ್ ಹತ್ತಿ, 46 ಹೆಕ್ಟೇರ್ ಕಬ್ಬು, 46 ಹೆಕ್ಟೇರ್ ಶೇಂಗಾ, 252 ಹೆಕ್ಟೇರ್ ಸೂರ್ಯಕಾಂತಿ ಸೇರಿ ಒಟ್ಟು 3,500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.
ಮಳೆಯಾಶ್ರಿತ ಬೆಳೆಗಳಿಗೆ 6,800 ರೂಪಾಯಿ, ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ 13,500 ರೂ., ಪರಿಹಾರ ಧನವನ್ನು ಪ್ರಕೃತಿ ವಿಕೋಪ ನಿಧಿಯಿಂದ ನೀಡಬೇಕು. ಆದರೆ, ಮಲಪ್ರಭಾ ಮತ್ತು ಬೆಣ್ಣೆಹಳ್ಳದ ಅಚ್ಚುಕಟ್ಟು ಪ್ರದೇಶಗಳ ರೈತರ ಜಮೀನುಗಳಲ್ಲಿ ರಾವಿ ಮಣ್ಣು (ಮರಳು ಮಿಶ್ರಿತ ಮಣ್ಣು) ಆವರಿಸಿದೆ. ಇಂತಹ ರೈತರಿಗೆ ಬೆಳೆ ಹಾನಿ ಜತೆಗೆ ಹೆಚ್ಚುವರಿಯಾಗಿ ಜಮೀನನ್ನು ಸರಿಪಡಿಸಿಕೊಳ್ಳಲು ಪ್ರತಿ ಹೆಕ್ಟೇರ್ಗೆ 12,200 ರೂಪಾಯಿ ಪರಿಹಾರಧನ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಇನ್ನು 700 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕೆ ಬೆಳೆ ಬೆಳೆಯಲಾಗಿತ್ತು. ಅದರಲ್ಲಿ 40 ಹೆಕ್ಟೇರ್ ಪೇರಲ, 500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮೆಣಸಿನಕಾಯಿ, ಉಳ್ಳಾಗಡ್ಡಿ, ಹಿರೇಕಾಯಿ, ಟೋಮ್ಯಾಟೋ, ಬದನೆಕಾಯಿ, ಕ್ಯಾಬೇಜ್, ತೆಂಗು, ಚಿಕ್ಕು, ಕರಿಬೇವು, ಲಿಂಬೆಹಣ್ಣು, ನುಗ್ಗೆ ಸೇರಿ ಒಟ್ಟು 90 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ತರಕಾರಿ ಬೆಳೆಗಳು ಹಾನಿಯಾಗಿವೆ.
ಎನ್ಡಿಆರ್ಎಫ್ ನಿಯಮದ ಪ್ರಕಾರ ತೋಟಗಾರಿಕೆ ಬೆಳೆ ಬೆಳೆದ ರೈತರಿಗೆ 18,000 ರೂಪಾಯಿ, ತರಕಾರಿ ಬೆಳೆದ ರೈತರಿಗೆ ಪ್ರತಿ ಹೆಕ್ಟೇರ್ಗೆ 13,500 ರೂ, ಮಳೆಯಾಶ್ರಿತ ಬೆಳೆಗಳಿಗೆ 6,800 ರೂಪಾಯಿ ಪರಿಹಾರಧನ ನೀಡಲು ಅವಕಾಶವಿದೆ. ಪ್ರಮುಖವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ಚವ್ಹಾಣ ತಿಳಿಸಿದರು.
ಲೋಕೋಪಯೋಗಿ ಇಲಾಖೆ, ಜಿಪಂ ಇಂಜಿನಿಯರಿಂಗ್ ವಿಭಾಗದ 202 ಕಿಮೀ ರಸ್ತೆಗಳು, 3 ಸಿಡಿಗಳು ಹಾನಿಯಾಗಿವೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬಗಳು, ಟಿಸಿ, ರೈತರ ಪಂಪ್ಸೆಟ್, ವಿದ್ಯುತ್ ತಂತಿಗಳು ಹರಿದಿರುವ ಮಾಹಿತಿ ಇನ್ನೂ ಬರಬೇಕಿದೆ.
ನಮ್ಮ 5 ಎಕರೆ ಸ್ವಂತ ಜಮೀನಿನಲ್ಲಿ 2 ಲಕ್ಷ ರೂ.ಖರ್ಚು ಮಾಡಿ 1,500 ಪೇರಲ ಸಸಿಗಳನ್ನು ಬೆಳೆಯಲಾಗಿತ್ತು. 4 ಲಕ್ಷ ರೂ. ಆದಾಯದ ನೀರಿಕ್ಷೆ ಇತ್ತು. ಆದರೆ, ಹೊಳೆ ಗಂಗವ್ವನ ಮೃತ್ಯು ಕೋಪಕ್ಕೆ ಇದೀಗ ಎಲ್ಲವೂ ಕೊಚ್ಚಿ ಹೋಗಿದೆ. ನಮ್ಮ ಬದುಕು ದುಸ್ತರವಾಗಿದೆ. ಅಧಿಕಾರಿಗಳು ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡಬೇಕು. | ಗುರುನಾಥರಡ್ಡಿ ಚೌಡರಡ್ಡಿ ಕೊಣ್ಣೂರಿನ ರೈತಪ್ರವಾಹ ಮತ್ತು ನಿರಂತರ ಮಳೆಯಿಂದ ನರಗುಂದದಲ್ಲಿ 30,ಗ್ರಾಮೀಣ ಪ್ರದೇಶಗಳಲ್ಲಿ 50ಕ್ಕೂ ಹೆಚ್ಚು ಮನೆಗಳು ಬಿದ್ದಿರುವ ಬಗ್ಗೆ ಕಂದಾಯ ಇಲಾಖೆಗೆ ಅರ್ಜಿಗಳು ಬಂದಿವೆ. ಇನ್ನೂ ಅರ್ಜಿಗಳು ಬರುತ್ತಿವೆ. ಪ್ರವಾಹದಿಂದ ಬಿದ್ದಿರುವ ಮನೆಗಳ ಸಮೀಕ್ಷೆಯನ್ನು ಪ್ರವಾಹ ಕಡಿಮೆಯಾದ ಬಳಿಕ ಕೈಗೊಳ್ಳಲಾಗುವುದು. | ಎ.ಎಚ್. ಮಹೇಂದ್ರ ತಹಸೀಲ್ದಾರ್ ನರಗುಂದ