ತುಮಕೂರು: ಮೂರು ವರ್ಷದ ಮಗುವನ್ನು ಕೊಲೆ ಮಾಡಿ, ಹಾವು ಕಚ್ಚಿ ಮೃತಪಟ್ಟಿದೆ ಎಂದು ನಾಟಕವಾಡಿದ್ದ ಮಲತಂದೆಯನ್ನು ತುಮಕೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಿಥುನ್ಗೌಡ(4) ಕೊಲೆಯಾದ ಮಗು. ನಗರದ ಸಿದ್ದಲಿಂಗಯ್ಯನಪಾಳ್ಯದಲ್ಲಿ ನೆಲೆಸಿದ್ದ ಚಾಮರಾಜನಗರದ ಚಂದ್ರಶೇಖರ(24) ಬಂಧಿತ. ಅಶೋಕ್ ಎಂಬಾತನ ಜತೆ ವಿವಾಹವಾಗಿದ್ದ ಬೆಳ್ಳೂರು ಕ್ರಾಸ್ನ ಕಾವ್ಯಾ ಗರ್ಭಿಣಿಯಾಗಿದ್ದಾಗಲೇ ಚಂದ್ರಶೇಖರನ ಜತೆ ಓಡಿ ಬಂದಿದ್ದಳು. ಮಿಥುನ್ಗೌಡ ಹುಟ್ಟಿದ ಮೂರು ವರ್ಷ ಚಂದ್ರಶೇಖರನ ಜತೆಯೇ ವಾಸವಾಗಿದ್ದಳು.
ಈ ನಡುವೆ ಕಾವ್ಯಾ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಳು. ಟಿಪ್ಪರ್ ಚಾಲಕನಾಗಿದ್ದ ಚಂದ್ರಶೇಖರ್ ಮಾ.20ರಂದು ಹಲ್ಲೆ ಮಾಡಿದ್ದರಿಂದ ಮಗು ಪ್ರಜ್ಞೆ ಕಳೆದುಕೊಂಡಿತ್ತು. ಅಕ್ಕಪಕ್ಕದ ಮನೆಯವರಿಗೆ ಮಗುವಿಗೆ ಹಾವು ಕಚ್ಚಿದೆ ಎಂದು ಸುಳ್ಳು ಹೇಳಿ ಆಸ್ಪತ್ರೆಗೆ ದಾಖಲಿಸುವ ನಾಟಕವಾಗಿದ್ದ. ಅಂತ್ಯಕ್ರಿಯೆಗೂ ಮುನ್ನ ಸಿದ್ದಲಿಂಗಯ್ಯನಪಾಳ್ಯದ ಎಸ್.ಆರ್.ಗಂಗಾಧರಯ್ಯ ಅವರು ಮಿಥುನ್ ಫೋಟೋ ತೆಗೆದುಕೊಂಡಿದ್ದರು.
ಮಾ.22ರಂದು ಮತ್ತೊಮ್ಮೆ ಫೋಟೋ ನೋಡಿದಾಗ ಮಗು ಸಾವಿನ ಬಗ್ಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದರಿಂದ ಕೊಲೆ ರಹಸ್ಯ ಬಯಲಾಗಿದೆ. ಮಗು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಕಾವ್ಯಾ ಹಾಗೂ ಚಂದ್ರಶೇಖರನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.