ಮಲಗಿದ್ದ ವೃದ್ಧನ ಮೇಲೆ ಚಿರತೆ ದಾಳಿ

25tnpnewsfile02
Published on

ತಿ.ನರಸೀಪುರ: ತಾಲೂಕಿನ ಮುತ್ತತ್ತಿ ಗ್ರಾಮದ ಮನೆಯ ಪಡಸಾಲೆಯಲ್ಲಿ ಮಲಗಿದ್ದ ವೃದ್ಧನ ಮೇಲೆ ಭಾನುವಾರ ಬೆಳಗಿನ ಜಾವ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ.


ಕರೋಹಟ್ಟಿ ಗ್ರಾಮದ ಮಹದೇವಯ್ಯ(60) ಗಾಯಗೊಂಡಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹದೇವಯ್ಯ ಅವರು ಮುತ್ತತ್ತಿಯ ಮಗಳ ಮನೆಗೆ ತೆರಳಿದ್ದರು. ಮನೆ ನವೀಕರಣವಾಗುತ್ತಿದ್ದ ಹಿನ್ನೆಲೆಯಲ್ಲಿ ಪಡಸಾಲೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಚಿರತೆ ದಾಳಿ ನಡೆಸಿದೆ. ಗಾಬರಿಗೊಂಡ ಅವರು ಮೈ ಮೇಲೆ ಹೊದ್ದುಕೊಂಡಿದ್ದ ಕಂಬಳಿಯನ್ನು ಚಿರತೆ ಮೇಲೆ ಎಸೆದಿದ್ದರಿಂದ ಅದು ಅಲ್ಲಿಂದ ಪರಾರಿಯಾಗಿದೆ. ಅಷ್ಟರಲ್ಲಾಗಲೇ ಚಿರತೆ ಕಚ್ಚಿ ಗಾಯಗೊಳಿಸಿದೆ.


ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಪ ವಲಯ ಅರಣ್ಯಾಧಿಕಾರಿ ಉಮೇಶ್, ಸಿಬ್ಬಂದಿ ಮರಿಸ್ವಾಮಿ, ಪುಟ್ಟಸ್ವಾಮಿ, ಮಹದೇವಯ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ತಾಲೂಕಿನಾದ್ಯಂತ ಚಿರತೆ ಹಾವಳಿ ಹೆಚ್ಚಿದ್ದು ಇತ್ತೀಚೆಗಷ್ಟೇ ಮುತ್ತತ್ತಿ ಹಾಗೂ ಉಕ್ಕಲಗೆರೆ ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ಎರಡು ಚಿರತೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿದಿದ್ದರು. ಈಗ ಮತ್ತೆ ಮುತ್ತತ್ತಿಯಲ್ಲಿ ಚಿರತೆ ದಾಳಿ ನಡೆಸಿರುವುದು ಗ್ರಾಮಸ್ಥರಲ್ಲಿ ಆತಂತಕ್ಕೆ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net