

ಬೇಲೂರು: ಮಲಗಿದ್ದ ಪತ್ನಿಯನ್ನು ಪತಿಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ನಂತರ ತಾನೂ ಸಹ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಸಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಂದನಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವದಲ್ಲಿ ನಡೆದಿದ್ದು ಪ್ರಕರಣ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿ ಪತಿಯನ್ನು ಬಂಧಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಚಂದನಹಳ್ಳಿ ಗ್ರಾಮದ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತಿದ್ದ 40 ವರ್ಷದ ಪ್ರೇಮಾ ಎಂಬುವವರೆ ಪತಿ ಶಾಂತೋಜಿರಾವ್‌ನ ಅನುಮಾನಕ್ಕೆ ಸಿಲುಕಿ ಕೊಲೆಯಾದ ದುರ್ದೈವಿಯಾಗಿದ್ದಾರೆ.
ಘಟನೆ: ತನ್ನ ಗ್ರಾಮದ ಪಕ್ಕದ ತಟ್ಟೆಕೆರೆಯಲ್ಲಿ ಅಂಗನವಾಡಿ ಶಿಕ್ಷಕಿಯಾಗಿದ್ದ ಮೃತ ಪ್ರೇಮಾ ಪತಿ ಶಾಂತೋಜಿರಾವ್‌ಗೆ ಎರಡನೇ ಪತ್ನಿಯಾಗಿದ್ದರೂ ಉತ್ತಮವಾಗಿ ಸಂಸಾರ ನಡೆಸಿಕೊಂಡು ಹೋಗುತಿದ್ದರು. ಆದರೆ ಕಳೆದ ಸಾಕಷ್ಟು ವರ್ಷಗಳ ಹಿಂದಿನಿಂದ ಕುಡಿದು ಬಂದು ಗಲಾಟೆ ಮಾಡುತಿದ್ದುದಲ್ಲದೆ, ಹೆಂಡತಿ ಮಕ್ಕಳಿಗೆ ಕಿರುಕುಳ ನೀಡುತಿದ್ದನು ಎಂದು ಎರಡು ವರ್ಷಗಳ ಹಿಂದೆ ಸಂಬಂಧಿಕರೊಂದಿಗೆ ಅಳಲು ತೋಡಿಕೊಂಡು ಪಂಚಾಯಿತಿ ನಂತರ ಪತಿಯಿಂದ ಬೇರೆಯಾಗಿ ತನ್ನ ತಾಯಿ ಮನೆಯಾದ ಚಂದನಹಳ್ಳಿ ಗ್ರಾಮದಲ್ಲೆ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಇತ್ತೀಚಿನ ಕೆಲ ದಿನಗಳಲ್ಲಿ ಹಬ್ಬದ ನೆಪದಲ್ಲಿ ಪತ್ನಿಯ ಮನೆಗೆ ಬಂದು ಮಕ್ಕಳೊಂದಿಗೆ ಒಟ್ಟಿಗೆ ಇದ್ದರು. ಆದರೆ ಗುರುವಾರ ಬೆಳಗಿನ ಜಾವದಲ್ಲಿ ಮನೆಯಲ್ಲಿ ಮಲಗಿದ್ದ ಪತ್ನಿಯ ಕುತ್ತಿಗೆಗೆ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿ, ಪಕ್ಕದಲ್ಲಿದ್ದ ಇಬ್ಬರು ಮಕ್ಕಳನ್ನು ಮತ್ತೊಂದು ಕೊಠಡಿಯಲ್ಲಿ ಕೂಡಿಹಾಕಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳು ಮನೆಯ ಹೆಂಚು ತೆಗೆದು ಜೋರಾಗಿ ಕೂಗಿ ಕೊಂಡಾಗ ಅಕ್ಕಪಕ್ಕದ ಮನೆಯವರು ಬಂದು ಭಾಗಿಲು ತೆರೆದು ನೋಡಿ ಅರೇಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಅರೇಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಸುರೇಶ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿ ಮಾಹಿತಿ ಪಡೆದು ಆರೋಪಿ ಪತಿಯನ್ನು ಬಂಧಿಸಲು ಕಾರ್ಯಚರಣೆಗಿಳಿದ ಸಂದರ್ಭ ಪತ್ನಿಯನ್ನು ಕೊಲೆ ಮಾಡಿದ್ದ ಪತಿ ಶಾಂತೋಜಿರಾವ್ ಸಹ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಚಂದನಹಳ್ಳಿ ಗ್ರಾಮದ ಮಾವಿನ ತೋಪಿಗೆ ಹೋಗಿ ಕತ್ತಿಯಿಂದ ತನ್ನ ಕುತ್ತಿಗೆ ಕೊಯ್ದು ಕೊಳ್ಳುತಿದ್ದಾಗ ಪೊಲೀಸರು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಘಟನೆ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸ್‌ಐ ಸುರೇಶ್ ಮತ್ತು ಸಿಬ್ಬಂದಿ ಆಗಮಿಸಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ