

ಮದ್ದೂರು: ಕೋಲಾರದಲ್ಲಿ ನಡೆದ ಮರ್ಯಾದ ಹತ್ಯೆಯ ಅಪರಾಧಿಯನ್ನು ಗಲ್ಲುಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟಿಸಲಾಯಿತು.
ಸಮಿತಿಯ ವಿಭಾಗೀಯ ಸಂಚಾಲಕ ಶಿವರಾಜ್ ಮರಳಿಗ ಮಾತನಾಡಿ, ದೇಶಕ್ಕೆ ಸ್ವಾತಂತ್ರೃ ಬಂದು 76 ವರ್ಷ ಕಳೆದರೂ ಜಾತಿ ವ್ಯವಸ್ಥೆ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಲೇ ಇದೆ. ಅಹಿಂದ ವರ್ಗದ ನಾಯಕರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಜಾತಿ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತೊಗೆಯಲು ಕಠಿಣ ಕಾನೂನನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಕೋಲಾರ ತಾಲೂಕಿನ ತೊಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಯುವಕನನ್ನು ಮೇಲ್ಜಾತಿಯ ಯುವತಿ ಪ್ರೀತಿ ಮಾಡುತ್ತಿದ್ದರು. ಇದೇ ಕಾರಣಕ್ಕೆ ಆಕೆಯ ತಂದೆ ಉಸಿರುಗಟ್ಟಿಸಿ ಕೊಲೆ ಮಾಡಿ ವಿಕೃತಿ ಮೆರೆದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಹೊರಟಿರುವುದು ಹೇಯ ಕೃತ್ಯವಾಗಿದೆ. ಇದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು. ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಗುರುಲಿಂಗಯ್ಯ, ಶಂಕರ್, ಮಹೇಶ್, ಮನೋಹರ್, ಅಪ್ಪಾಜಿ, ತಿಮ್ಮೇಶ್, ಕುಮಾರ್, ಶ್ರೀನಿವಾಸ್ ಇದ್ದರು.
28ಎಂಡಿಆರ್3
ಕೋಲಾರದಲ್ಲಿ ನಡೆದ ಮರ್ಯಾದ ಹತ್ಯೆಯ ಅಪರಾಧಿಯನ್ನು ಗಲ್ಲುಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. ಶಿವರಾಜ್ ಮರಳಿಗ, ಗುರುಲಿಂಗಯ್ಯ, ಶಂಕರ್ ಇತರರು ಇದ್ದರು.