

ಲಿಂಗದಹಳ್ಳಿ: ಉಡೇವಾ ಗ್ರಾಮದ ಮರೆಕಲ್ಲಳ್ಳಿ ಶ್ರೀ ರಂಗನಾಥ ಸ್ವಾಮಿ ಜಾತ್ರೆ ಮೇ 3ರಂದು ಆರಂಭಗೊಂಡು ಬುಧವಾರ ಬೆಳಗ್ಗೆ 9ರಿಂದ 10 ಗಂಟೆಯವರೆಗೆ ನಡೆದ ಬ್ರಹ್ಮ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.
ಬೆಳಗ್ಗೆ 101 ಎಡೆ ಸೇವೆ ಮಾಡುವುದರಿಂದ ಆರಂಭವಾದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಸಂದರ್ಭದಲ್ಲಿ ಆಕಾಶದಲ್ಲಿ ಹಾರಾಡಿದ ಗರುಡ ಪಕ್ಷಿಯನ್ನು ಕಂಡ ಭಕ್ತರು ರೋಮಾಂಚನಗೊಂಡು ಶ್ರೀ ರಂಗನಾಥ ಸ್ವಾಮಿಗೆ ಜೈಕಾರ ಹಾಕುತ್ತ ಬ್ರಹ್ಮರಥ ಎಳೆದರು. ಈ ಸಂದರ್ಭದಲ್ಲಿ ಉಡೇವಾ, ಲಿಂಗದಹಳ್ಳಿ, ಯರದಂಕಲು, ಗಂಗೂರು, ಕಾಮನದುರ್ಗ ಮುಂತಾದ ಗ್ರಾಮಗಳ ಭಕ್ತಾದಿಗಳು ಶ್ರೀ ರಂಗನಾಥ ಸ್ವಾಮಿಯ ರಥಕ್ಕೆ ದವಸ ಧಾನ್ಯ, ಬಾಳೆ ಹಣ್ಣು , ಹೂವು ಮುಂತಾದ ಮಂಗಳ ದ್ರವ್ಯಗಳನ್ನು ಎರಚಿ ಹರಕೆಗಳನ್ನು ತೀರಿಸಿದರು.
ಬ್ರಹ್ಮ ರಥೋತ್ಸವ ಸಂದರ್ಭದಲ್ಲಿ ಉಡೇವಾ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪಾನಕದ ಬಂಡಿಗಳನ್ನು ಹೊಡೆದುಕೊಂಡು ಬಂದು ಶ್ರೀ ಸ್ವಾಮಿ ಬ್ರಹ್ಮ ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಹರಕೆಗಳನ್ನು ತೀರಿಸಿದ್ದಲ್ಲದೇ ರಥೋತ್ಸವಕ್ಕೆ ಬಂದಿದ್ದ ಭಕ್ತಾದಿಗಳಿಗೆ ಬೆಲ್ಲದ ಪಾನಕ, ಕೋಸುಂಬರಿ ವಿತರಿಸಿದರು.
ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ತಮ್ಮಯ್ಯ ಮತ್ತು ಪದಾಧಿಕಾರಿಗಳು, ಉಡೇವಾ ಗ್ರಾಪಂ ಅಧ್ಯಕ್ಷ್ಷೆ ಭಾರತಿ ಸಿ. ರಾಜಪ್ಪ, ತಾಪಂ ಮಾಜಿ ಸದಸ್ಯ ಎಸ್.ಎ.ಕೃಷ್ಣಪ್ಪ ಇತರರಿದ್ದರು.