ಮರಿಯಾಲ ಮಠದಲ್ಲಿ ಡಿ.15 ಮತ್ತು 16 ರಂದು ಬಸವೋತ್ಸವ, ಶ್ರೀ ಮಹಾಂತ ಭವನ ಉದ್ಘಾಟನೆ, ಬಸವ ಪುತ್ಥಳಿ ಅನಾವರಣ ಹಾಗೂ 25 ವರ್ಷಗಳ ಪಟ್ಟಾಧಿಕಾರ ಮಹೋತ್ಸವ ಬೆಳ್ಳಿ ಹಬ್ಬವನ್ನು ಆಚರಣೆ ಮಾಡಲು ಚಿಂತನೆ ಮಾಡಲಾಗಿದೆ ಎಂದು ಶ್ರೀಮಠದ ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು. ಎರಡು ದಿನಗಳ ಕಾರ್ಯಕ್ರಮ ಸುತ್ತೂರು ಶ್ರಿಗಳು, ಸಿದ್ದಗಂಗಾ ಶ್ರೀಗಳು, ಕನಕಪುರ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ನಡೆಯಲಿದೆ. ಶರಣರ ವಿಚಾರಗಳ ಸಂಗಮ, ವಚನ ಸಂಪುಟಗಳ ಮೆರವಣಿಗೆ, ಸಸಿಗಳ ನೆಟ್ಟು ಪರಿಸರ ಸಂರಕ್ಷಣೆ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ, 25 ಮಂಟಪಗಳ ಪೂಜೆ, ಬಿಲ್ವಾರ್ಚನೆ, ಸಾಂಸ್ಕೃತಿಕ ಕಾರ್ಯಕ್ರಮ , ಬಸವೇಶ್ವರರು, ಮಹಾಂತ ಸ್ವಾಮಿಗಳ ಪುತ್ಥಳಿ ಅನಾವರಣ, ಕಲ್ಯಾಣ ಮಂಟಪ ಉದ್ಘಾಟನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಅಲ್ಲದೇ ಚಿತ್ರದುರ್ಗ, ಉತ್ತರ ಕರ್ನಾಟಕ ಹಾಗೂ ರಾಜ್ಯದ ನಾನಾ ಭಾಗಗಳಿಂದ ಗುರುಗಳು ಹಾಗೂ ಶರಣರನ್ನು ಆಹ್ವಾನಿಸಲಾಗುತ್ತದೆ ಎಂದರು.