

ಗಂಗಾಧರ್ ಬೈರಾಪಟ್ಟಣ ರಾಮನಗರ
ಅಳಿವಿನಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದು ಜೋಡಿಯೊಂದು ಮರಿಗೆ ಜನ್ಮ ನೀಡಿರುವುದು ಪಕ್ಷಿ ಪ್ರಿಯರಲ್ಲಿ ಸಂತಸ ಮೂಡಿಸಿದೆ.
ನಗರದ ಹೊರವಲಯದ ರಾಮದೇವರ ಬೆಟ್ಟದ ರಣಹದ್ದು ಧಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಮರಿ ಜನಿಸಿದ್ದು, ಸುರಕ್ಷಿತವಾಗಿದೆ. ಪರಿಸರ ಸ್ನೇಹಿಯಾದ ಉದ್ದ ಕೊಕ್ಕಿನ ರಣಹದ್ದು ಸಂತತಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿದ್ದ ಇವುಗಳ ಸಂಗತಿ ಈಗ ಬೆರಳೆಣಿಕೆಯಷ್ಟು ಆಗಿದೆ. ಇದರ ನಡುವೆ ರಾಮದೇವರ ಬೆಟ್ಟದಲ್ಲಿರುವ ರಣಹದ್ದು ಜೋಡಿಯೊಂದು ಮರಿಗೆ ಜನ್ಮ ನೀಡಿದೆ.
ಅಪರೂಪದ ಘಟನೆ: ರಣಹದ್ದು ಮರಿ ಮಾಡುವುದು ಅಪರೂಪದ ಘಟನೆ ಎನ್ನುವಂತೆ ಆಗಿದೆ. ರಾಮದೇವರ ಬೆಟ್ಟದಲ್ಲಿ ಈ ಹಿಂದೆ ಸಾವಿರಾರು ರಣಹದ್ದುಗಳು ಇದ್ದವು ಎನ್ನುವುದು ಹಿರಿಯರ ಮಾತು. ಕಾಲ ಕಳೆದಂತೆ ಇವುಗಳ ಸಂತತಿ ಕ್ಷೀಣಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಮೊಟ್ಟೆಯಿಟ್ಟು ಮರಿ ಮಾಡುವ ಪ್ರಕ್ರಿಯೆಯೂ ಅಪರೂಪವಾಗಿತ್ತು. ಕಳೆದ 6 ವರ್ಷಗಳ ಹಿಂದೆ ಜೋಡಿಯೊಂದು ಮರಿ ಮಾಡಿತ್ತು ಎನ್ನುವುದು ಬಿಟ್ಟರೆ ಅಂದಿನಿಂದ ಪ್ರತಿವರ್ಷ ಮೊಟ್ಟೆ ಇಟ್ಟರೂ ವಿವಿಧ ಕಾರಣಗಳಿಗಾಗಿ ಮರಿ ಮಾಡುವಲ್ಲಿ ವಿಲವಾಗಿದ್ದವು.
ಸುರಕ್ಷತೆಗೆ ಕ್ರಮ: ಪ್ರತಿದಿನ ಆಹಾರ ಹುಡುಕುತ್ತಾ ನೂರಾರು ಕಿ.ಮೀ. ಹಾರುವ ಸಾಮರ್ಥ್ಯವನ್ನು ರಣಹದ್ದುಗಳು ಹೊಂದಿವೆ. ಆದರೂ ಈ ಬಾರಿ ಅಪರೂಪಕ್ಕೆ ಎಂಬಂತೆ ಮರಿ ಆಗಿರುವುದರಿಂದ ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯವಾಗಿಯೇ ರಣಹದ್ದುಗಳಿಗೆ ಆಹಾರ ದೊರೆಯುವಂತೆ ಮಾಡಲು ವೈದ್ಯರಿಂದ ಅನುಮತಿ ಪಡೆದ ಮಾಂಸವನ್ನು ಸ್ಥಳದಲ್ಲಿಯೇ ಒದಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತಿಸಿದ್ದಾರೆ. ಅಲ್ಲದೆ, ನೀರೂ ಸಹ ಸ್ಥಳೀಯವಾಗಿಯೇ ದೊರೆಯುವಂತೆ ಮಾಡಲು ಇದ್ದ ನೀರಿನ ಹೊಂಡವನ್ನು ಶುಚಿಗೊಳಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿದೆ.
ವರ್ಷಕ್ಕೆ ಒಂದೇ ಮೊಟ್ಟೆ: ರಣಹದ್ದು ವರ್ಷಕ್ಕೆ ಒಂದೇ ಮೊಟ್ಟ ಇಟ್ಟು ಮರಿ ಮಾಡುತ್ತವೆ. ಸಾಮಾನ್ಯವಾಗಿ ನವೆಂಬರ್‌ನಿಂದ ಮಾರ್ಚ್ ಅಂತ್ಯದವರೆಗೆ ಮೊಟ್ಟೆ ಇಟ್ಟು ಮರಿ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಮೊಟ್ಟೆಯಿಟ್ಟ ಸುಮಾರು 55-60 ದಿನಗಳಿಗೆ ಮೊಟ್ಟೆಯೊಡೆದು ಮರಿ ಆಚೆ ಬರುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಣಹದ್ದು ಮರಿ ಮಾಡಿರುವುದು ಅಪರೂಪದ ಘಟನೆ ಎನ್ನುವಂತೆ ಆಗಿದೆ. 6 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮರಿ ಆಗಿದ್ದು, ಪ್ರಸ್ತುತ ಇಲ್ಲಿ ನಾಲ್ಕು ರಣಹದ್ದುಗಳು ಹಾಗೂ ಒಂದು ಮರಿ ಇದೆ. ಇವುಗಳ ರಕ್ಷಣೆಗೆ ಇಲಾಖೆ ಹಾಗೂ ಸಾರ್ವಜನಿಕರು ಮುಂದಾಗಬೇಕು. ಬಿ.ಶಶಿಕುಮಾರ್, ಕಾರ್ಯದರ್ಶಿ, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ == ಬಹಳ ವರ್ಷಗಳ ನಂತರ ಅಳಿವಿನಂಚಿನಲ್ಲಿರುವ ರಣಹದ್ದು ಮರಿ ಮಾಡಿದ್ದು, ಇದು ಸಂತಸದ ವಿಚಾರ. ಮರಿ ಸುರಕ್ಷಿತವಾಗಿದ್ದು, ಇದರ ರಕ್ಷಣೆಗೆ ಮಾನವ ಸಂಪರ್ಕ ಇರದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯವಾಗಿಯೇ ಆಹಾರ ದೊರೆಯುವಂತೆ ಮಾಡಲು ಚಿಂತಿಸಲಾಗಿದೆ. ಕಿರಣ್, ಆರ್‌ಎ್ಒ, ರಾಮನಗರ ವಲಯ