

ನಾಗಮಂಗಲ: ತಾಲೂಕಿನ ಹೂವಿನಹಳ್ಳಿ ಗ್ರಾಮದಿಂದ ಮಲ್ಲರಾಜಪುರದ ಕಡೆಗೆ ಹೋಗುವ ರಸ್ತೆಯಲ್ಲಿ ಜವರೇಗೌಡ ಎಂಬುವವರಿಗೆ ಸೇರಿದ ಜಮೀನಿನ ಸಮೀಪ ಭಾನುವಾರ ಸಂಜೆ ಚಿರತೆಯೊಂದು ಮೂರು ಮರಿಗಳೊಂದಿಗೆ ಇರುವುದು ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ.
ಗ್ರಾಮಸ್ಥರನ್ನು ಕಂಡ ಚಿರತೆ ಒಂದು ಮರಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಕಣ್ಮರೆಯಾಗಿದೆ. ತಕ್ಷಣವೇ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆ ಮರಿಗಳನ್ನು ರಕ್ಷಿಸಿದ್ದಾರೆ. ಅಲ್ಲದೆ, ಚಿರತೆ ರಾತ್ರಿ ಬರುವ ಸೂಚನೆ ಮನಗಂಡು ಮುಂಜಾಗ್ರತಾ ಕ್ರಮವಾಗಿ ಬೋನನ್ನು ಇಡಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯು ಮರಿಯೊಂದಿಗೆ ಇದ್ದು, ಜನರನ್ನು ಕಂಡು ಗಾಬರಿಯಿಂದ ಮರಿಗಳನ್ನು ಬಿಟ್ಟು ಹೋಗಿದೆ. ಚಿರತೆಯನ್ನು ಹಿಡಿಯಲು ಬೋನನ್ನು ಇಟ್ಟಿದ್ದು, ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ. ಗ್ರಾಮದ ಹೊರವಲಯ ಸೇರಿದಂತೆ ಜಮೀನಿಗಳಿಗೆ ಸಂಚರಿಸುವಾಗ ಎಚ್ಚರಿಕೆ ವಹಿಸಿ ಎಂದು ತಿಳಿಸಿದ್ದಾರೆ.
ಸ್ಥಳದಲ್ಲಿ ವಲಯ ಅರಣ್ಯಾಧಿಕಾರಿ ಆರ್.ಎನ್. ಮಂಜುನಾಥ್, ಅರಣ್ಯ ರಕ್ಷಕ ದಿಲೀಪ್ ಇತರರಿದ್ದರು.