ಮರಾಠಾ ರೈತರಿಗೆ ಬೋರ್ ವೆಲ್ ಫ್ರೀ

santosh laad
Published on

ಬೀದರ್: ಬೀದರ್ ಜಿಲ್ಲೆಯ ಮರಾಠಾ ಸಮಾಜದ ಆರ್ಥಿಕ ಹಿಂದುಳಿದ ರೈತರಿಗೆ ಒಂದು ಸಾವಿರ ಕೊಳವೆಬಾವಿ(ಬೋರ್ ವೆಲ್) ಉಚಿತವಾಗಿ ಕೊರೆಸಿಕೊಡುವುದಾಗಿ ಮಾಜಿ ಸಚಿವ, ಮರಾಠಾ ಸಮಾಜದ ಮುಖಂಡ ಸಂತೋಷ ಲಾಡ್ ಭರವಸೆ ನೀಡಿದರು.

ನಗರದ ನೌಬಾದ್ ನಲ್ಲಿನ ಮರಾಠಾ ಭವನದಲ್ಲಿ ಏರ್ಪಡಿಸಿದ ಜಿಲ್ಲೆಯ ಮರಾಠಾ ಸಮಾಜ ಪ್ರಮುಖರ ಬೈಕ್ ನಲ್ಲಿ ಮಾತನಾಡಿ, ಗಡಿ ಭಾಗದಲ್ಲಿರುವ ಮರಾಠಾ ಸಮಾಜದವರ ಸಮಗ್ರ ಅಭಿವೃದ್ಧಿಗೆ ನಾನು ಸದಾ ಸಿದ್ಧನಿರುವೆ. ಸಮಾಜದ ಪರ ನಿರಂತರ ಕೆಲಸಕಾರ್ಯಗಳಲ್ಲಿ ತೊಡಗುವೆ. ಪ್ರತಿ ತಿಂಗಳಿಗೊಮ್ಮೆ ಜಿಲ್ಲೆಗೆ ಭೇಟಿ ನೀಡಿ, ಸಮಾಜದ ಪ್ರಗತಿ ಪರಾಮರ್ಶೆ ನಡೆಸುವೆ ಎಂದರು.

ಪ್ರಮುಖರಾದ ವಿಜಯಕುಮಾರ ಕಣಜಿಕರ್, ಮುರಳಿಧರರಾವ ಕಾಳೆ, ಅಂಗದ ಜಗತಾಪ, ಸಂದೀಪ ತೇಲಗಾಂವಕರ್, ಅಶೋಕ ಸೋನಜೆ, ವೆಂಕಟೇಶ ಮಹಿಂದೆ, ಬನ್ಸಿಲಾಲ ಬೋರಳೆ, ರಘುನಾಥರಾವ ಜಾಧವ, ಹಣಮಂತರಾವ ಚವ್ಹಾಣ್, ಕಿರಣ ಬಿರಾದಾರ, ಗೋರಖ್ ಶ್ರೀಮಾಳೆ, ಸಂತೋಷ ಶೆಡೋಳೆ, ಪ್ರದೀಪ ಬಿರಾದಾರ, ಹಣಮಂತರಾವ ಮಾನಕಾರಿ, ಬಾಲಾಜಿ ಕಣಜಿಕರ್, ಬಾಲಾಜಿ ಚಂಡಕಾಪುರೆ, ಯುವರಾಜ ಪಾಟೀಲ್, ಜನಾರ್ಧನ ಬಿರಾದಾರ ಇತರರಿದ್ದರು.
ಇದಕ್ಕೂ ಮುನ್ನ ಸಂತೋಷ ಲಾಡ್ ಅವರು ನೌಬಾದ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಮರಾಠಾ ಸಮಾಜ ಸೇವಾ ಟ್ರಸ್ಟ್ ನೂತನ ಜಿಲ್ಲಾ ಕಾರ್ಯಾಲಯ ಉದ್ಘಾಟಿಸಿದರು. ಈ ವೇಳೆ ಸಮಾಜದಿಂದ ಅದ್ದೂರಿ ಸನ್ಮಾನ ನೀಡಲಾಯಿತು.

ಮರಾಠಾ ಜನಗಣತಿ ನಡೆಸಿ

ಬೀದರ್ ಜಿಲ್ಲೆಯಲ್ಲಿ ಮರಾಠಾ ಜನಸಂಖ್ಯೆ ಎಷ್ಟಿದೆ ಎಂಬ ಬಗ್ಗೆ ನಿಖರ ಮಾಹಿತಿ ಹೊಂದಲು ಖಾಸಗಿಯಾಗಿ ಗಣತಿ ಕಾರ್ಯ ನಡೆಸಿ ಎಂದು ಜಿಲ್ಲೆಯ ಮುಖಂಡರಿಗೆ ಸಂತೋಷ ಲಾಡ್ ಹೇಳಿದರು. ಜನಗಣತಿಯಿಂದ ಜಿಲ್ಲೆಯಲ್ಲಿ ಮರಾಠಾ ಸಮಾಜದವರು ಎಷ್ಟಿದ್ದಾರೆ? ಅವರ ಸ್ಥಿತಿಗತಿ ಹೇಗಿದೆ ಎನ್ನುವ ಮಾಹಿತಿ ತಿಳಿಯಲಿದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮಾಜದ ಜನರನ್ನು ಪ್ರಗತಿಯತ್ತ ಕೊಂಡೊಯ್ಯಲು ಸಹ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.

ಬೀದರ್ ಜಿಲ್ಲೆಯ ಆರೂ ವಿಧಾನಸಭೆ ಕ್ಷೇತ್ರಗಳಲ್ಲಿ ಮರಾಠಾ ಸಮಾಜದ ಜನಸಂಖ್ಯೆ ಅಧಿಕವಿದ್ದು, ಅಭ್ಯರ್ಥಿ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಸಮಾಜ ಬೆಂಬಲಿಸಿದ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಗೆದ್ದ ಅನೇಕ ಉದಾಹರಣೆಗಳು ಇಲ್ಲಿವೆ. ಹೀಗಾಗಿ ಸಂಘಟಿತರಾಗಿ ಸಮುದಾಯದ ಅಭಿವೃದ್ಧಿಗೆ ಪ್ರಯತ್ನಿಸಬೇಕು.ಸಂತೋಷ ಲಾಡ್, ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net