

ಬೀದರ್: ಮರಾಠ ಸಮುದಾಯಕ್ಕೆ ಜಿಲ್ಲೆಯ ಕನಿಷ್ಠ ಒಂದು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಬೇಕು ಎಂದು ಸಕಲ ಮರಾಠ ಸಮಾಜದ ಮುಖಂಡರಾದ ವಕೀಲ ಯುವರಾಜ ಬಳವಂತರಾವ್ ಪಾಟೀಲ ಆಗ್ರಹಿಸಿದ್ದಾರೆ.
ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಮರಾಠ ಮತದಾರರ ಸಂಖ್ಯೆ ಮೂರು ಲಕ್ಷ ಇದೆ. ಭಾಲ್ಕಿಯಲ್ಲಿ 72 ಸಾವಿರ, ಬಸವಕಲ್ಯಾಣ 52 ಸಾವಿರ, ಔರಾದ್ 65 ಸಾವಿರ, ಆಳಂದ 40 ಸಾವಿರ ಹಾಗೂ ಹುಮನಾಬಾದ್‍ನಲ್ಲಿ 18 ಸಾವಿರ ಮರಾಠ ಮತದಾರರು ಇದ್ದಾರೆ. ಶೇ 95 ರಷ್ಟು ಜನ ಪ್ರತಿ ಚುನಾವಣೆಯಲ್ಲೂ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
2018 ರಲ್ಲಿ ಮರಾಠ ಸಮುದಾಯಕ್ಕೆ ಜಿಲ್ಲೆಯ ಒಂದೂ ಕ್ಷೇತ್ರದ ಟಿಕೆಟ್ ಕೊಟ್ಟಿಲ್ಲ. ವಿಧಾನ ಪರಿಷತ್, ಸರ್ಕಾರದ ನಿಗಮ, ಮಂಡಳಿಗಳ ನಾಮ ನಿರ್ದೇಶನದಲ್ಲೂ ಪ್ರಾತಿನಿಧ್ಯ ಕಲ್ಪಿಸಿಲ್ಲ. ಪಕ್ಷವನ್ನು ಬೆಂಬಲಿಸುತ್ತ ಬಂದರೂ, ನಿರ್ಲಕ್ಷ್ಯ ಮುಂದುವರಿದಿರುವುದು ಸಮುದಾಯಕ್ಕೆ ನೋವು ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ನ್ಯಾಯ ಸೂತ್ರ ಪಾಲಿಸದೆ ಕಳೆದ ಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಒಂದೇ ಸಮುದಾಯಕ್ಕೆ ಟಿಕೆಟ್ ನೀಡಿದ ಕಾರಣ ಮರಾಠ ಸಮುದಾಯದಲ್ಲಿ ಅಸಮಾಧಾನ ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿತ್ತು. ಮತಗಳು ವಿಭಜನೆಯಾಗಿ ಮೀಸಲು ಕ್ಷೇತ್ರ ಹೊರತುಪಡಿಸಿ ಇತರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಸೋಲು ಉಂಟಾಗಿತ್ತು. ಹೀಗಾಗಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಹಿಂದಿನ ತಪ್ಪು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಭಾಲ್ಕಿ ವಿಧಾನಸಭಾ ಕ್ಷೇತ್ರ ಮರಾಠ ಸಮುದಾಯದ ಅಭ್ಯರ್ಥಿ ಒಳ್ಳೆಯ ಮತಗಳ ಅಂತರದಿಂದ ಗೆಲ್ಲಲು ಅನುಕೂಲಕರವಾದ ಕ್ಷೇತ್ರವಾಗಿದೆ. ಹೀಗಾಗಿ ಜಿಲ್ಲೆಯಿಂದ ಹೆಚ್ಚಿನ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಲು ಅನುಕೂಲವಾಗುವಂತೆ ಭಾಲ್ಕಿ ಕ್ಷೇತ್ರದ ಟಿಕೆಟ್ ಮರಾಠ ಸಮುದಾಯಕ್ಕೆ ನೀಡಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.