

ಕೊಳ್ಳೇಗಾಲ: ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ವಿವಿಧ ದೇವಾಲಯಗಳಲ್ಲಿ ಶನಿವಾರ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.
ಶ್ರೀ ಮೀನಾಕ್ಷಿ ಸಮೇತ ಮರಳೇಶ್ವರ ದೇವಾಲಯ ಹಾಗೂ ಮರಡಿಗುಡ್ಡದ ಮಹದೇಶ್ವರನ ದೇಗುಲಗಳಿಗೆ ನೂರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಮರಳೇಶ್ವರಸ್ವಾಮಿಗೆ ಮುಂಜಾನೆಯಿಂದಲೇ ರುದ್ರಾಭಿಷೇಕ, ಏಕವಾರ ರುದ್ರಾಭಿಷೇಕ, ಮಹಾಮಂಗಳಾರತಿ ನೆರವೇರಿಸಿದ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಸರ್ಕಾರದಿಂದ ಸರಬರಾಜಾಗಿದ್ದ ಪವಿತ್ರ ಗಂಗಾಜಲವನ್ನು ಭಕ್ತರಿಗೆ ನೀಡಲಾಯಿತು. ಸಂಜೆ ಪಂಚಾಮೃತ ಸೇರಿದಂತೆ ವಿವಿಧ ಫಲಗಳಿಂದ ಅಭಿಷೇಕ ಮಾಡಲಾಯಿತು. ಬೆಳಗ್ಗೆಯಿಂದಲೇ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿದ ಬಂದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಇನ್ನು ದೇವಾಲಯದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಮಿಸಿದ್ದ ಜ್ಯೋತಿರ್ಲಿಂಗಕ್ಕೆ ಪೂಜೆ ಸಲ್ಲಿಸಿ ನಂತರ ಭಕ್ತರ ವೀಕ್ಷಣೆಗೆ ಅನುಕೂಲ ಮಾಡಲಾಗಿತ್ತು. ಪ್ರಧಾನ ಅರ್ಚಕ ನಾಗೇಂದ್ರ ದೀಕ್ಷಿತ್ ಭಟ್ ಹಾಗೂ ಶಿವರಾಮ್ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.