

ಬೆಳಗಾವಿ: ಅಭಿವೃದ್ಧಿ ಕಾಮಗಾರಿಗಳು ಹಾಗೂ ಕಟ್ಟಡ ನಿರ್ಮಾಣಕ್ಕೆ ಕಡು ಬಡವರಿಗೂ ಕೈಗೆಟುಕಲಿ ಎಂಬ ಮಹತ್ವಕಾಂಕ್ಷೆಯಿಂದ ಜಾರಿಗೊಳಿಸಿರುವ ನೂತನ ಮರಳು ನೀತಿ ಇನ್ನೂ ಕಾಗದದಲ್ಲೇ ಇದೆ. ಮರಳು ಮಾಫಿಯಾ ಇಂದಿಗೂ ಮುಂದುವರಿದಿದ್ದು, ತನ್ನ ಕಬಂದ ಬಾಹು ಮತ್ತಷ್ಟು ವಿಸ್ತರಿಸಿದೆ.
ಜಿಲ್ಲೆಯ ಹಳ್ಳ, ಕೊಳ್ಳ ಹಾಗೂ ನದಿಗಳಲ್ಲೇ ಹೆಚ್ಚಾಗಿ ನಡೆಯುತ್ತಿದ್ದ ಮರಳು ಮಾಫಿಯಾ ಇದೀಗ ಜಲಾಶಯಗಳ ಒಡಲನ್ನೂ ಬಗೆಯುತ್ತಿದೆ. ‘500 ರೂ. ಕೊಡುವಲ್ಲಿ ಸಾವಿರ ರೂ. ಕೊಟ್ಟರೆ, ಎಲ್ಲದಕ್ಕೂ ಓಕೆ’ ಎನ್ನುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಲಂಚಬಾಕುತನದಿಂದಾಗಿ ಮರಳು ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ.
ಕಳಪೆ ಮರಳು: ಕಾನೂನಾತ್ಮಕವಾಗಿ ಸಂಗ್ರಹಿಸಬೇಕಿದ್ದ ಮರಳನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಿ, ಜಿಲ್ಲೆಯಲ್ಲಿ ಕೇವಲ ನಾಲ್ಕು ಮರಳು ಬ್ಲಾಕ್‌ಗಳನ್ನು ಮಾತ್ರ ನಿರ್ವಹಿಸಲಾಗುತ್ತಿದೆ. ಇದರಿಂದ ಸಹಜವಾಗಿಯೇ ಬೇಡಿಕೆಗೆ ತಕ್ಕಂತೆ ಎಲ್ಲರಿಗೂ ನಿಗದಿತ ದರದಲ್ಲಿ ಮರಳು ಪೂರೈಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಅವಶ್ಯವಿರುವವರು ದಂಧೆಕೋರರಿಂದ ಮಣ್ಣು ಮಿಶ್ರಿತ, ಕಡಿಮೆ ಗುಣಮಟ್ಟದ ಮರಳನ್ನೇ ಹೆಚ್ಚಿನ ದರಕ್ಕೆ ಖರೀದಿಸುವ ಅನಿವಾರ್ಯತೆ ಸೃಷ್ಟಿಸಲಾಗುತ್ತಿದೆ. ಆದರೆ, ಜಿಲ್ಲಾಡಳಿತ ಮಾತ್ರ ತನಗೇನೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದೆ ಎಂಬ ದೂರು ಕೇಳಿಬರುತ್ತಿದೆ.
ಅಕ್ರಮದಲ್ಲೂ ಅಧಿಕಾರಿಗಳ ‘ಕೈ’: ನದಿಗಳು ತುಂಬಿವೆ. ಹೀಗಾಗಿ, ಎಲ್ಲಿಯೂ ಮರಳು ತೆಗೆಯಲಾಗುತ್ತಿಲ್ಲ. ಹೀಗಾಗಿ ಜಿಲ್ಲಾದ್ಯಂತ ಬರೀ ಮೂರು ‘ಸ್ಟಾಕ್ ಯಾರ್ಡ್’ ನಿರ್ವಹಿಸಲಾಗುತ್ತಿದೆ ಎನ್ನುತ್ತಾರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು. ಆದರೆ, ಮರಳು ಮಾಫಿಯಾ ಹಿಂದೆ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಪ್ರಭಾವಿಗಳ ಕೈವಾಡ ಇದೆ. ಹೀಗಾಗಿಯೇ ಅಕ್ರಮ ದಂಧೆ ರಾಜಾರೋಷವಾಗಿ ನಡೆಯುತ್ತಿದೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಾಖಲೆಗಳ ಪ್ರಕಾರ ಜಿಲ್ಲಾದ್ಯಂತ ಕೇವಲ ಮೂರು ಮರಳು ಬ್ಲಾಕ್‌ಗಳು ಮಾತ್ರ ಕಾರ್ಯಾಚರಣೆಯಲ್ಲಿವೆ. ಆದರೆ ಅಸಲಿಗೆ, ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ (ಚಿಕ್ಕೋಡಿ, ರಾಯಬಾಗ, ಅಥಣಿ) ಹುಕ್ಕೇರಿ, ಗೋಕಾಕ ತಾಲೂಕಿನ ಗೂಗಿಕೊಳ್ಳ, ದುಂಡಾನಟ್ಟಿ ಹತ್ತಿರದ ಸವಳ ಹಳ್ಳ, ರಾಮದುರ್ಗ, ಸವದತ್ತಿ, ಖಾನಾಪುರ ತಾಲೂಕು ಸೇರಿದಂತೆ ಮಾರ್ಕಂಡೇಯ, ಘಟಪ್ರಭಾ ನದಿ ಹಾಗೂ ಹಿಡಕಲ್ ಜಲಾಶಯದ ಹಿನ್ನೀರಿನ ನದಿ ಪಾತ್ರದಲ್ಲೂ ಅಕ್ರಮ ಮರಳು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಜಿಲ್ಲೆಯ ಯಾವುದೇ ನದಿ ಹಾಗೂ ಹಳ್ಳಗಳಿಗೆ ಭೇಟಿ ನೀಡಿದರೂ ಅಲ್ಲಿ ಜೆಸಿಬಿ ಘರ್ಜನೆ ಕೇಳುತ್ತಿದ್ದು, ದುಂಡಾನಟ್ಟಿ ಪ್ರದೇಶದಲ್ಲೇ ಪ್ರತಿದಿನ 100ಕ್ಕೂ ಅಧಿಕ ಟಿಪ್ಪರ್ ಮರಳು ಸಾಗಾಣಿಕೆ ನಡೆಯುತ್ತಿದೆ. ಮರಳು ಸಾಗಿಸುವ ನೂರಾರು ವಾಹನಗಳ ಸಂಚಾರದಿಂದಾಗಿ ಜಲಮೂಲಗಳ ಸ್ವರೂಪವೇ ಬದಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ದಾಖಲೆಗಳ ಪ್ರಕಾರ, ನೂತನ ಮರಳು ನೀತಿಯಡಿ ಅನುಮತಿ ಪಡೆದ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಳಿನಾಗಲಾಪುರ, ಖಾನಾಪುರ ತಾಲೂಕಿನ ಕೊಡಚವಾಡ-ಚಿಕ್ಕದಿನಕೊಪ್ಪ, ರಾಮದುರ್ಗ ತಾಲೂಕಿನಲ್ಲಿ ನದಿಗೆ ಗುರುತಿಸಿರುವ ಗೊಣ್ಣಾಗರ ಬ್ಲಾಕ್‌ಗಳು ಮಾತ್ರ ವಿಲೇವಾರಿ ನಡೆಸಿವೆ. ರಾಮದುರ್ಗ ತಾಲೂಕಿನ ಸಂಗಳ, ಕಲ್ಲೂರ, ಕಿತ್ತೂರ, ಗೊಣ್ಣಾಗರ, ಕಲಹಾಳ, ಚಿಕ್ಕಮೂಲಂಗಿ, ಅಥಣಿ ತಾಲೂಕಿನ ನಂದೀಶ್ವರ ಹಳೆಯ ಮರಳು ನೀತಿಯಡಿ ಈಗಾಗಲೇ ಮಂಜೂರಾತಿ ನೀಡಲಾಗಿದ್ದರೂ, ಅವು ನಡೆಯುತ್ತಿಲ್ಲವಂತೆ. ಇನ್ನು ಹಳ್ಳದಲ್ಲಿನ ಮರಳು ನಿಕ್ಷೇಪಗಳಾಗಿ ಗೋಕಾಕ ತಾಲೂಕಿನ ಅಂಕಲಗಿ, ಉಪ್ಪಾರಟ್ಟಿ, ರಾಮದುರ್ಗ ತಾಲೂಕಿನ ಅವರಾದಿ, ಕಾಮನಕೊಪ್ಪ, ಚಿಪ್ಪಲಕಟ್ಟಿ, ತೊಂಡಿಕಟ್ಟಿ, ಬಿಜಗುಪ್ಪಿ, ಕುನ್ನಾಳ, ಹಿರೇಕೊಪ್ಪ, ಮೂಡಲಗಿ ತಾಲೂಕಿನ ಯಾದವಾಡದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ.
ಜಿಲ್ಲೆಯ ಎಲ್ಲ ನದಿಗಳು ತುಂಬಿದ್ದರಿಂದ ಕಡಿಮೆ ಮರಳು ಬ್ಲಾಕ್‌ಗಳಿವೆ. ಈಗಾಗಲೇ ಅನುಮತಿ ನೀಡಿರುವ ಖಾನಾಪುರ, ಬೈಲಹೊಂಗಲ ಹಾಗೂ ರಾಮದುರ್ಗ ತಾಲೂಕಿನ 4 ಬ್ಲಾಕ್‌ಗಳು ಮಾತ್ರ ಮರಳು ವಿಲೇವಾರಿ ನಡೆಸುತ್ತಿವೆ.| ಲೋಕೇಶಕುಮಾರ್ ಜಿ.ಎನ್. ಉಪನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಳಗಾವಿ
| ರವಿ ಗೋಸಾವಿ ಬೆಳಗಾವಿ