ಮರಳು ಅಕ್ರಮ ಸಾಗಣೆ ಅವ್ಯಾಹತ

26srt-1
Published on

ಶಿರಹಟ್ಟಿ: ತಾಲೂಕಿನ ಹಳ್ಳದ ಪ್ರದೇಶಗಳಲ್ಲಿ ಮರಳು ಅಕ್ರಮ ಸಾಗಾಣಿಕೆ ಅವ್ಯಾಹತವಾಗಿ ನಡೆದಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳ ಅನಾದರ ಧೋರಣೆಯೇ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಗಣಿ ಮತ್ತು ಭೂವಿಜ್ಞಾನ ಸಚಿವರ ಜಿಲ್ಲೆಯಲ್ಲೇ ಅಕ್ರಮ ಮರಳು ಸಾಗಾಟದ ದಂಧೆ ನಡೆದಿರುವುದು ಪ್ರಜ್ಞಾವಂತ ನಾಗರಿಕರಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ. ತಾಲೂಕಿನ ತುಂಗಭದ್ರಾ ನದಿ ಪಾತ್ರದ ಗ್ರಾಮಗಳ ಹಳ್ಳದ ಪ್ರದೇಶದಲ್ಲಿನ ಮರಳು ತೆಗೆದು ಅಕ್ಕಪಕ್ಕದ ಖಾಲಿ ನಿವೇಶನಗಳಲ್ಲಿ ಸಂಗ್ರಹಿಸಿ ಬೆಳಗಾಗುವಷ್ಟರಲ್ಲಿ ಸಾಗಿಸಲಾಗುತ್ತಿದೆ.

3-4 ತಿಂಗಳ ಹಿಂದೆ ಸುರಿದ ಸತತ ಮಳೆಯಿಂದ ತುಂಗಭದ್ರಾ ನದಿಗೆ ಪ್ರವಾಹ ಬಂದ ಕಾರಣ ನದಿಯಲ್ಲೀಗ ನಿರಂತರ ನೀರು ಹರಿಯುತ್ತಿದೆ. ಇದರಿಂದಾಗಿ ಸುತ್ತಲಿನ ಸಾಸಲವಾಡ, ತಂಗೋಡ, ಕನಕವಾಡ, ಹೆಬ್ಬಾಳ ಗ್ರಾಮಕ್ಕೆ ಹೊಂದಿಕೊಂಡ ಹಳ್ಳಗಳಲ್ಲಿ ಯಥೇಚ್ಛವಾಗಿ ಮರಳು ಸಿಗುತ್ತಿದೆ. ಇದು ಅಕ್ರಮ ಮರಳು ಸಾಗಣೆದಾರರಿಗೆ ವರವಾಗಿ ಪರಿಣಮಿಸಿದೆ.

ಸಾಗಾಟಕ್ಕೆ ವ್ಯವಸ್ಥಿತ ಜಾಲ: ಅಕ್ಕ ಪಕ್ಕದ ಜನತೆ ಹೇಳುವಂತೆ ಅಕ್ರಮ ಮರಳು ಸಾಗಾಟಕ್ಕೆ ವ್ಯವಸ್ಥಿತ ಜಾಲ ಇದೆ ಎನ್ನಲಾಗುತ್ತಿದೆ. ಅಕಸ್ಮಾತ್ ಮರಳು ಸಂಗ್ರಹ ಸ್ಥಳಗಳಿಗೆ ಹೋಗಲು ಯಾರಾದರೂ ಯತ್ನಿಸಿದರೆ ಅದಕ್ಕಾಗಿ ದಿನಕ್ಕೆ ಇಂತಿಷ್ಟು ಹಣ ನೀಡಿ ನೇಮಿಸಿದ ಏಜೆಂಟರು ಕ್ಷಣಾರ್ಧದಲ್ಲಿ ಮಾಲೀಕರಿಗೆ ಫೋನ್ ಮೂಲಕ ಮಾಹಿತಿ ರವಾನಿಸುತ್ತಾರೆ. ಇನ್ನು ಕೂಲಿಕಾರರು ಮರಳು ತುಂಬಿದ ಟ್ರ್ಯಾಕ್ಟರ್​ಗಳನ್ನು ಬೇಡಿಕೆ ಇರುವಲ್ಲಿಗೆ ಸಾಗಿಸಿ ಅವರಿಂದ ಪ್ರತಿ ಟ್ರ್ಯಾಕ್ಟರ್​ಗೆ 5 ಸಾವಿರ ರೂ. ಡಿಮ್ಯಾಂಡ್ ಮಾಡುತ್ತಾರೆ ಎನ್ನಲಾಗುತ್ತಿದೆ. ಅಚ್ಚರಿ ಸಂಗತಿ ಎಂದರೆ ಮರಳು ಅಕ್ರಮವಾಗಿ ಸಾಗಿಸುವವರ ಮೇಲೆ ನಿಗಾ ವಹಿಸುವ ಪೊಲೀಸ್ ಇಲಾಖೆ ಸಿಬ್ಬಂದಿಯ ಕಣ್ತಪ್ಪಿಸಿ ವಾಮ ಮಾರ್ಗದ ಮೂಲಕ ಸಾಗಿಸಲಾಗುತ್ತಿದೆ.

ಜನರ ಮೂಕ ರೋದನ: ಅಕ್ರಮ ಮರಳು ಸಾಗಾಟವೇ ದಂಧೆಕೋರರಿಗೆ ಪ್ರಧಾನವಾಗಿದ್ದರಿಂದ ಕೆಲವೊಮ್ಮೆ ಹಳ್ಳದ ಬದಿಯ ಹೊಲಗಳಲ್ಲಿ ಟ್ರಾಕ್ಟರ್ ಹಾಯಿಸಿಕೊಂಡು ಹೋದರೂ ಯಾರೂ ಪ್ರಶ್ನಿಸುವಂತಿಲ್ಲ. ಹೀಗಾಗಿ ವಿಧಿ ಇಲ್ಲದೇ ಈ ಭಾಗದ ಜನರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮೂಕರ್ಜಿ ಸಲ್ಲಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಅಕ್ರಮ ಮರಳು ಸಾಗಾಣಿಕೆ ಪತ್ತೆ ಹಚ್ಚಲು ಖಾಕಿ ಪಡೆ ಸಿದ್ಧವಾಗಿದ್ದು, ಅದಕ್ಕಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ. ಇನ್ನು ಮೇಲೆ ಅಂಥ ಪ್ರಕರಣ ಕಂಡು ಬಂದಲ್ಲಿ ಮುಲಾಜಿಲ್ಲದೇ ಅವರ ಮೇಲೆ ಪ್ರಕರಣ ದಾಖಲಿಸಿ ಮುಂದಿನ ಕ್ರಮಕ್ಕೆ ಸಂಬಂಧಿಸಿದ ಇಲಾಖೆಗೆ ಒಪ್ಪಿಸಲಾಗುತ್ತದೆ. | ಸುನೀಲಕುಮಾರ ನಾಯಕ, ಪಿಎಸ್​ಐ, ಶಿರಹಟ್ಟಿ

ಮರಳು ವಹಿವಾಟು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಗಾ ವಹಿಸಲು ಸೂಚನೆ ನೀಡಿದ್ದಾರೆ. ಅಂಥ ಅಕ್ರಮ ಚಟುವಟಿಕೆ ನಡೆದಿದ್ದು ಕಂಡು ಬಂದರೆ ನನ್ನ ಗಮನ ಸೆಳೆಯಲು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಹಾಗೇನಾದರೂ ಕಂಡುಬಂದರೆ ಸ್ಥಳಕ್ಕೆ ಹೋಗಿ ಪರೀಶೀಲಿಸಿ ಮುಂದಿನ ಕ್ರಮ ಜರುಗಿಸುತ್ತೇನೆ.| ಯಲ್ಲಪ್ಪ ಗೋಣೆಣ್ಣವರ, ತಹಸೀಲ್ದಾರ್ ಶಿರಹಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net