ಮರಳಿ ಮನಸಾಗಿದೆ ಚಿತ್ರಕ್ಕೆ ಭಾರಿ ಬೆಂಬಲ

Marali Mansagide
Published on

ಬೀದರ್: ಉದಯೋನ್ಮುಖ ಕಲಾವಿದ, ಸ್ಥಳೀಯ ಗಾಯಕ ನಾಗರಾಜ್ ಜೋಗಿ ನಾಯಕ ನಟನಾಗಿ ಅಭಿನಯಿಸಿದ `ಮರಳಿ ಮನಸಾಗಿದೆ' ಕಿರುಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಯೂಟೂಬ್ನಲ್ಲಿ ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ 23 ಸಾವಿರಕ್ಕೂ ಅಧಿಕ ಪ್ರೇಕ್ಷಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎನ್2ಜೆ ಪ್ರೊಡಕ್ಷನ್ ಮೂಲಕ ನೇಹಾ ನಾಗರಾಜ್ ಜೋಗಿ ನಿರ್ಮಾಣ ಮಾಡಿರುವ ಕಿರು ಚಿತ್ರವನ್ನು ತ್ರಿವಿಕ್ರಮ ರಘು ಕಥೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದು, ಎಂ.ಎಸ್. ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೇವಲ 13.33 ನಿಮಿಷದ ಕಿರುಚಿತ್ರ ಒಂದು ಇಡೀ ಚಿತ್ರವನ್ನೇ ವೀಕ್ಷಿಸಿದ ಅನುಭವ ನೀಡಲಿದೆ.

ಶನಿವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ನಾಯಕ ನಾಗರಾಜ್ ಜೋಗಿ ಚಿತ್ರ ಯಶಸ್ಸಿನ ಸಂತಸವನ್ನು ಹಂಚಿಕೊಂಡಿದ್ದಾರೆ. ಕಿರುಚಿತ್ರದ ಚಿತ್ರೀಕರಣ ಚಿಕ್ಕಮಗಳೂರು ಜಿಲ್ಲೆ ಮೂಡಗೇರಿಯಲ್ಲಿ ನಡೆದಿದ್ದು, ಉಗ್ರಾವತಾರ ಚಿತ್ರಕ್ಕೆ ಕ್ಯಾಮರಾಮನ್ ಕೆಲಸ ಮಾಡಿರುವ ವೀಣಾ ನಂದಕುಮಾರ್ ಇಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ. ಕೋಲಾರದ ಜಸ್ಸಿಕಾ ಪ್ರತಿಮಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಒಂದು ಸಾಂಗ್ ಬಿಟ್ ಕೂಡ ಇದೆ. ಅ.25ರಂದು ನನ್ನದೇ ಸ್ವಂತ ಯೂಟೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈವರೆಗೆ 23 ಸಾವಿರ ಜನರು ವೀಕ್ಷಿಸಿ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.

ಗಾಯಕನಾಗಿ ರಸಮಂಜರಿ ಕಾರ್ಯಕ್ರಮಗಳ ಮೂಲಕ ಪರಿಚಿತಗೊಂಡ ನನಗೆ ನಟನೆಯಲ್ಲಿ ಬಹಳಷ್ಟು ಆಸಕ್ತಿ ಇತ್ತು. ನನ್ನ ಸ್ವಂತ ಬ್ಯಾನರ್ನಲ್ಲೇ ನಾಯಕ ನಟನಾಗಿ ನಟಿಸುವ ಮೂಲಕ ಈ ಚಿತ್ರವನ್ನು ತೆರೆಗೆ ತಂದಿದ್ದೇನೆ. ಬರುವ ದಿನಗಳಲ್ಲಿ ಇಂಥ ಹಲವು ಚಿತ್ರಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ನಾಗರಾಜ್ ಜೋಗಿ ಉತ್ತಮ ಗಾಯಕ. ಗಾಯನ ಜತೆ ಇದೀಗ ನಾಯಕ ನಟನಾಗುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಿದ್ದಾರೆ. ಕಿರುಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ಮಾಪಕಿ ನೇಹಾ ನಾಗರಾಜ್, ಸಂಗೀತ ನಿರ್ದೇಶಕ ಗುರು ಪ್ರಿಯಾ ಮತ್ತು ಸಂಗಮೇಶ ವಾಲೆ ಇದ್ದರು.

ಕಿರುಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನೆಲೆಯಲ್ಲಿ ದೊಡ್ಡ ಬಜೆಟ್‌ ಹೊಸ ಚಿತ್ರವೊಂದಕ್ಕೆ ಆಫರ್ ಬಂದಿದೆ. ದೀಪಾವಳಿಗೆ ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಬರುವ ದಿನಗಳಲ್ಲಿ ಸ್ವಂತ ಬ್ಯಾನರ್ನಲ್ಲೇ ಚಿತ್ರ ನಿರ್ಮಿಸುವ ಉದ್ದೇಶವಿದೆ.| ನಾಗರಾಜ್ ಜೋಗಿ, ನಾಯಕ ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net