

ಬೀದರ್: ಜೆಡಿಎಸ್ ನಿಂದ ಹಿಂದೆ ಎರಡು ಸಲ ಬಸವಕಲ್ಯಾಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಖೂಬಾ ಸಾರ್ವತ್ರಿಕ ಚುನಾವಣೆ ವೇಳೆ ಮರಳಿ ಗೂಡು ಸೇರಲು ನಿರ್ಧರಿಸಿದ್ದಾರೆ.
2018ರ ಚುನಾವಣೆ ಹೊಸ್ತಿಲಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ನಾನು, ಶೀಘ್ರದಲ್ಲಿಯೇ ಯಾವುದೇ ಷರತ್ತು ಇಲ್ಲದೆ ಜೆಡಿಎಸ್ ಗೆ ಸೇರಲು ನಿರ್ಧರಿಸಿದ್ದಾಗಿ ಬಸವಕಲ್ಯಾಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಜ್ಯ ಮತ್ತು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ 2018ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದೆ. ಪಕ್ಷ ಟಿಕೆಟ್ ನೀಡಿದ್ದರೂ ಪಕ್ಷದವರು ಸಹಕಾರ ನೀಡಲಿಲ್ಲ. ಹೀಗಿದ್ದರೂ 44 ಸಾವಿರ ಮತ ಪಡೆದು ಸೋತೆ. ನಂತರದ ಉಪ ಚುನಾವಣೆಯಲ್ಲಿ ಟಿಕೆಟ್ ನೀಡದೆ ಅನ್ಯಾಯ ಮಾಡಿತು ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಸೇರಿ ತಪ್ಪು ಮಾಡಿದೆ ಎಂದು ಅನಿಸುತ್ತಿದೆ. ಹೀಗಾಗಿ ರಾಮನವಮಿ ಶುಭ ದಿನವಾದ ಇಂದು ದರ್ಶನಾಶೀರ್ವಾದ ಪಡೆದು ಜೆಡಿಎಸ್ ಸೇರಲು ನಿರ್ಧರಿಸಿದ್ದೇನೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಶೀರ್ವಾದ ಪಡೆದು ಶೀಘ್ರ ಪಕ್ಷ ಸೇರುತ್ತೇನೆ. ಎಚ್.ಡಿ. ಕುಮಾರಸ್ವಾಮಿ ಮತ್ತೆ ಸಿಎಂ ಆಗಬೇಕು. ಅವರ ಪಂಚರತ್ನ ಯೋಜನೆ ಅನುಷ್ಠಾನವಾಗಬೇಕು ಎಂದು ಹೇಳಿದರು.
ಬಿಕೆಡಿಬಿಗೆ ಮೊದಲ ಸಲ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಅನುದಾನ ನೀಡಲಾಗಿದೆ. ಬಿಕೆಡಿಬಿ ಇಲ್ಲದಿದ್ದರೆ ಅನುಭವ ಮಂಟಪ ಕೆಲಸ ಎಲ್ಲಿಂದ ಆಗುತ್ತಿತ್ತು? ಯಡಿಯೂರಪ್ಪ ಅನುಭವ ಮಂಟಪ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಪರುಷ ಕಟ್ಟೆ ಕೆಲಸ ಬಿಕೆಡಿಬಿಯಿಂದ ನಡೆಯುತ್ತಿದೆ. ಆದರೆ ಶಾಸಕ ಶರಣು ಸಲಗರ ನಾನೇ ಮಾಡಿದ್ದು ಎಂದು ಪ್ರಚಾರ ಪಡೆಯುತ್ತಿದ್ದಾರೆ. ಎಲ್ಲ ನಾನೇ ಮಾಡಿದ್ದು ಎನ್ನುತ್ತಾರೆ. ಕರೊನಾ ವೇಳೆ ಅಕ್ಕಿ ಹಂಚಿದ್ದು, ಜನರನ್ನು ಬೆಂಗಳೂರಿಗೆ ಕರೆದೊಯ್ದಿರುವುದಕ್ಕೆ ಹಣ ಎಲ್ಲಿಂದ ಬಂತು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಶಾಸಕರು ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಕೇಳಲು ಪ್ರತಿಪಕ್ಷದವರೇ ಇಲ್ಲದಂತಾಗಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳಒಪ್ಪಂದ ಮಾಡಿಕೊಂಡಿರಬಹುದು ಎಂಬ ಅನುಮಾನ ಬರುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು.