ಮರಣಪತ್ರ ಬರೆದಿಟ್ಟು ಆತ್ಮಹತ್ಯೆ

Crime Logo
Published on

ಕಲಬುರಗಿ: ಬ್ಯಾಂಕ್‌ನಿಂದ ಸಾಲ ಕೊಡಿಸುವುದಾಗಿ ಹಣ ಪಡೆದ ವ್ಯಕ್ತಿಯು ಸಾಲ ಕೊಡಿಸಲಿಲ್ಲ ಎಂದು ಮರಣಪತ್ರ ಬರೆದಿಟ್ಟು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಭೂಪಾಲ ತೆಗನೂರ ಗ್ರಾಮ ಪಂಚಾಯಿತಿ ಸದಸ್ಯ ಮಹೇಶ ರಾಜೇಂದ್ರ ಗುತ್ತೇದಾರ್ (35) ಆತ್ಮಹತ್ಯೆ ಮಾಡಿಕೊಂಡವರು. ಹಣ ಪಡೆದು ಬ್ಯಾಂಕ್ ಸಾಲ ಮಾಡಿಸದ ಆರೋಪದಡಿ ಡೇನಿಯಲ್ ಸ್ಯಾಮ್ಯುಯೆಲ್ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹೇಶ ಅವರು ಮಧ್ಯಸ್ಥಿಕೆ ವಹಿಸಿ ತಮ್ಮ ಗೆಳೆಯರು, ಸಂಬಂಧಿಕರಿಗೆ ಬ್ಯಾಂಕ್‌ ಸೇರಿ ಇತರೆಡೆಯಿಂದ ಸಾಲ ಕೊಡಿಸುತ್ತಿದ್ದರು. ದೊಡ್ಡಮ್ಮನ ಪುತ್ರ ಸೋಮಶೇಖರ ಹಾಗೂ ಗೆಳೆಯ ಸುರೇಶ, ಪ್ರಭು ಅವರಿಂದ ಬ್ಯಾಂಕ್‌ ಸಾಲ ಮಾಡಿಸಲು ಹಣ ಪಡೆದ ಮಹೇಶ, ಆ ಹಣವನ್ನು ಡೇನಿಯಲ್‌ಗೆ ಕೊಟ್ಟಿದ್ದರು. ಹಣ ಪಡೆದ ಡೇನಿಯಲ್ ಸಾಲ ಕೊಡಿಸದೆ, ಹಣವೂ ಮರಳಿಸಲಿಲ್ಲ. ಇದರಿಂದ ನೊಂದು ಮಹೇಶ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಡೇನಿಯಲ್ ಕಾರಣವೆಂದು ಮರಣಪತ್ರ ಬರೆದಿಟ್ಟಿದ್ದಾರೆ ಎಂದು ಆರೋಪಿಸಿ ಮೃತರ ಪತ್ನಿ ದೂರು ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net