ಮರಣ ಪ್ರಕರಣಗಳ ಪರಿಶೀಲನೆಗೆ ತಜ್ಞರ ಸಮಿತಿ

CTD ....DC 6
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ, ಕ್ಷಯರೋಗಿಗಳ ಮರಣ ಪ್ರಕರಣಗಳೂ ಸೇರಿ ಸರ್ಕಾರಿ ಆಸ್ಪತ್ರೆಗಳಲ್ಲಿ ವಿವಿಧ ಕಾರಣಗಳಿಗಾಗಿ ಸಂಭವಿಸುವ ಸಾವಿನ ಪ್ರಕರಣಗಳ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಿ ಪರಿಶೀಲನೆ ನಡೆಸಲಾಗುವುದು ಎಂದು ಡಿಸಿ ಟಿ.ವೆಂಕಟೇಶ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಕ್ಷಯರೋಗ ವೇದಿಕೆ ಸಭೆ, ರಾಷ್ಟ್ರೀಯ ಆರೋಗ್ಯ ಮಿಷನ್ ಹಾಗೂ ಲಸಿಕಾ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಈ ವರ್ಷ 8 ತಾಯಂದಿರ ಹಾಗೂ 101 ಶಿಶುಗಳ ಮರಣ ಸಂಭವಿಸಿವೆ. 62 ಕ್ಷಯರೋಗಿಗಳು ಮೃತಪಟ್ಟಿದ್ದಾರೆ. ತಾಯಿ ಮತ್ತು ಶಿಶು ಮರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಮರಣಕ್ಕೂ ಮುನ್ನ ವಿವಿಧ ಆಸ್ಪತ್ರೆಗಳಲ್ಲಿ ಯಾವೆಲ್ಲ ಚಿಕಿತ್ಸೆ ಪಡೆದಿದ್ದರು, ವೈದ್ಯರ ಚಿಕಿತ್ಸೆ ಶಿಫಾರಸು, ಇತ್ಯಾದಿ ಸಮರ್ಪಕ ಮಾಹಿತಿ ಲಭ್ಯವಾಗುತ್ತಿಲ್ಲ. ಹೀಗಾಗಿ ಯಾವುದೇ ತಾಯಿ, ಶಿಶು ಮರಣ ಪ್ರಕರಣದ ಪರಿಶೀಲನೆಯಲ್ಲಿ ಸಮರ್ಪಕ ಮಾಹಿತಿ ಲಭ್ಯವಾದಲ್ಲಿ ಮರಣ ಪ್ರಕರಣಗಳನ್ನು ತಡೆಗಟ್ಟಬಹುದಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ. ಆದ್ದರಿಂದ ಸಮಿತಿಯನ್ನು ಶೀಘ್ರ ರಚಿಸಲಾಗುವುದು ಎಂದರು.

ಕ್ಷಯರೋಗದಿಂದ ಸಂಭವಿಸಿರುವ ಮರಣ ಪ್ರಮಾಣ ಕಳೆದ ಜನವರಿಯಿಂದ ಜುಲೈವರೆಗೆ ಶೇ.8 ಇದೆ. ರಾಜ್ಯದ ಸರಾಸರಿ ಶೇ.6 ಇದ್ದು, ಕ್ಷಯ ರೋಗ ಪತ್ತೆ ವಿಳಂಬದಿಂದ ಮರಣ ಸಾಧ್ಯತೆ ಅಧಿಕವಿರುತ್ತದೆ. ಆದ್ದರಿಂದ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಒ. ಸುಧಾ ಮಾತನಾಡಿ, ಜಿಲ್ಲೆಯಲ್ಲಿ 6.25 ಲಕ್ಷ ಜನರ ಸ್ಕ್ರೀನಿಂಗ್ ಮಾಡಲಾಗಿದೆ. ಪ್ರಸ್ತುತ 2138 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಷಯರೋಗಿಗಳಿಗೆ ನೀಡುವ ಔಷಧಗಳನ್ನು ಖಾಸಗಿ ಮೆಡಿಕಲ್ ಸ್ಟೋರ್‌ಗಳಲ್ಲಿ ಮಾರಾಟ ಮಾಡುವಂತಿಲ್ಲ. ಉತ್ತಮ ಆರೋಗ್ಯ ಸೇವೆ ನೀಡುವ ಸಲುವಾಗಿ ಶೀಘ್ರದಲ್ಲೇ ಪಾಕ್ಷಿಕ ಪ್ರಾರಂಭವಾಗಲಿದೆ ಎಂದರು.

ಜಿಲ್ಲೆಯಲ್ಲಿ ಲಸಿಕೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಡಿಸಿ ಸೂಚಿಸಿದರು.

ಹಿರಿಯ ಸರ್ವೆಲೆನ್ಸ್ ಮೆಡಿಕಲ್ ಅಧಿಕಾರಿ ಡಾ. ಶ್ರೀಧರ್ ಮಾತನಾಡಿ, ದಡಾರಾ, ರುಬೆಲ್ಲಾ ನಿರ್ಮೂಲನೆಗೆ ಕಣ್ಗಾವಲು ವ್ಯವಸ್ಥೆಗೆ ಪ್ರತಿ ತಿಂಗಳಿಗೊಮ್ಮೆ ಪರಿಶೀಲನೆ ಮಾ ಡುವುದು ಲಸಿಕೆ ನೀಡುವ ಉದ್ದೇಶವಾಗಿದೆ ಎಂದರು.

ಸಶಕ್ತ ಪರಿವಾರ ಅಭಿಯಾನದಡಿ ಅಕ್ಟೋಬರ್ 12 ರವರೆಗೆ ಸೂಕ್ಷ್ಮಪ್ರದೇಶಗಳಲ್ಲಿ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಪಂ ಸಿಇಒ ಡಾ.ಎಸ್. ಆಕಾಶ್, ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net