

ಗುತ್ತಲ: ಗ್ರಾಮಕ್ಕೆ ಮೂಲಸೌಕರ್ಯ ಒದಗಿಸುವುದು, ಪ್ರಸಕ್ತ ಸಾಲಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾದ ಪರಿಹಾರದ ಹಣ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಮರಡೂರ ಗ್ರಾಮಸ್ಥರು ಹಾಲಗಿ ಗ್ರಾಮ ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಹಾಲಗಿ ಗ್ರಾಪಂ ವ್ಯಾಪ್ತಿಯ ಮರಡೂರ ಗ್ರಾಮದಲ್ಲಿ ಮೂವರು ಸದಸ್ಯರಿದ್ದರೂ ಸರ್ಕಾರದ ಯೋಜನೆಗಳು ಗ್ರಾಮಸ್ಥರಿಗೆ ತಲುಪುವಲ್ಲಿ ವಿಳಂಬವಾಗುತ್ತಿದೆ. ಇದಕ್ಕೆ ಗ್ರಾಪಂ ಅಧಿಕಾರಿಗಳು ಗ್ರಾಮದ ಮೇಲೆ ತೋರುತ್ತಿರುವ ಮಲತಾಯಿ ಧೋರಣೆಯೇ ಕಾರಣವಾಗಿದೆ. ನರೇಗಾದಲ್ಲಿ ಕೃಷಿಹೊಂಡ ನಿರ್ವಣ, ಜಮೀನು ಅಭಿವೃದ್ಧಿ ಫಲಾನುಭವಿಗಳಿಗೆ ಸರ್ಕಾರದಿಂದ ಮಂಜೂರಾದ ಹಣ ಇದುವರೆಗೂ ಖಾತೆಗೆ ಜಮೆಯಾಗಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ 5 ತಿಂಗಳಿಂದ ಪಿಡಿಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಗ್ರಾಮಸ್ಥರು ದೂರಿದರು.
ಗ್ರಾಮಸ್ಥ ದೀಪಕ ದೊಡ್ಡಗೌಡ್ರ ಮಾತನಾಡಿ, ಕಳೆದ 6 ತಿಂಗಳಿಂದ ಕೃಷಿಹೊಂಡ ನಿರ್ವಣಕ್ಕೆ ಮಂಜೂರಾದ ಹಣ ಪಾವತಿಸುವಂತೆ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಸರ್ವರ್ ಸರಿಯಿಲ್ಲ. ಇಲಾಖೆಗೆ ಮಾಹಿತಿ ಕಳಿಸಿದ್ದೇವೆ ಎನ್ನುತ್ತಿದ್ದಾರೆ. ನಮಗಿಂತಲೂ ಹಿಂದೆ ಕೃಷಿ ಹೊಂಡ ನಿರ್ವಿುಸಿಕೊಂಡರ ಖಾತೆಗೆ ಹಣ ಪಾವತಿಯಾಗಿದೆ. ಆದರೆ, ಕೆಲವರಿಗೆ ಆಗಿಲ್ಲ. ಎರಡು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡದಿದ್ದರೆ ಗ್ರಾಪಂಗೆ ಬೀಗ ಹಾಕುತ್ತೇವೆ ಎಂದು ಎಚ್ಚರಿಸಿದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ವಾರದೊಳಗಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ದೂರವಾಣಿ ಮೂಲಕ ಪಿಡಿಒ ದಾವಲಸಾಬ್ ಕಮಗಾಲ ಗ್ರಾಮಸ್ಥರಿಗೆ ತಿಳಿಸಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟು ಕಾರ್ಯದರ್ಶಿ ಬಸವರಾಜ ವಡ್ಡರ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮಸ್ಥರಾದ ಎಸ್.ಆರ್. ಪಾಟೀಲ, ಗಂಗಾಧರಯ್ಯ ಮಠದ, ಸಿ.ಕೆ. ನದಾಫ್, ಈರಣ್ಣ ಹರವಿ, ರಾಮರೆಡ್ಡಿ ರಡ್ಡೇರ, ಗುಡ್ಡಪ್ಪ ಶೇಸತನವಿ, ಫಕೀರಪ್ಪ ಕಾಕೋಳ, ಎಸ್.ಎಂ. ಮಠಪತಿ, ಎನ್.ಜಿ. ಪಾಟೀಲ, ಬಸವಣೆಪ್ಪ ಶೇಸತನವಿ, ನಾರಾಯಣಗೌಡ ಪಾಟೀಲ, ಶ್ರೀನಿವಾಸ ದೊಡ್ಡಗೌಡ್ರ, ಸುಭಾನಿ ನದಾಫ್, ಸಿ.ಕೆ. ಹಿರೇಮಠ ಪ್ರತಿಭಟನೆಯಲ್ಲಿದ್ದರು.