ಮರಗಳ್ಳರೊಂದಿಗೆ ಶಾಮೀಲಾದ ಡಿಆರ್‌ಎಫ್‌ಒ ಅಮಾನತು

ಮರಗಳ್ಳರೊಂದಿಗೆ ಶಾಮೀಲಾದ ಡಿಆರ್‌ಎಫ್‌ಒ ಅಮಾನತು
Published on

ಅರಕಲಗೂಡು: ಅಕ್ರಮ ಮರ ಕಡಿತಕ್ಕೆ ಶಾಮೀಲು ಹಾಗೂ ಕರ್ತವ್ಯಲೋಪ ಆರೋಪದಡಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಪ್ರಾದೇಶಿಕ ವಲಯ ಮಲ್ಲಿಪಟ್ಟಣ ಶಾಖೆಯ ಡಿಆರ್‌ಎಫ್‌ಒ ರಘು ಅವರನ್ನು ಕೆ.ಎನ್. ರಘು ಎಂಬುವವರನ್ನು ಅಮಾನತುಗೊಳಿಸಿ ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಅರಣ್ಯಾಧಿಕಾರಿ ರಘು ವಾಸವಿರುವ 1 ಕಿ.ಮೀ. ಅಂತರದ ಆಸುಪಾಸಿನಲ್ಲಿ ಬೆಲೆ ಬಾಳುವ ಹೊನ್ನೆ, ನಂದಿ ತೇಗದ ಮರಗಳನ್ನು ಕಡಿದಿರುವ ಬಗ್ಗೆ ಡಿಆರ್‌ಎಫ್‌ಒ ರಘುನನ್ನು ವಿಚಾರಿಸಿದಾಗ ಮಲ್ಲಿಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಯಾವುದೇ ಮರಗಳ ಅಕ್ರಮ ಕಡಿತಲೆ ಆಗಿಲ್ಲ ಎಂದು ತಿಳಿಸಿದ್ದರು. ಆದರೆ ಈ ಬಗ್ಗೆ ಬೇರೆ ಶಾಖಾ ಸಿಬ್ಬಂದಿಯನ್ನು ಸ್ಥಳಕ್ಕೆ ಮಫ್ತಿಯಲ್ಲಿ ಕಳುಹಿಸಿ ಪರಿಶೀಲನೆ ನಡೆಸಿದಾಗ ಉಪ ವಲಯ ಅರಣ್ಯಾಧಿಕಾರಿ ವಾಸವಿರುವ ವಸತಿ ಗೃಹದ 1 ಕಿ.ಮೀ. ಹತ್ತಿರವೇ ಅಕ್ರಮವಾಗಿ ಹೊನ್ನೆ ಮರ ಕಡಿತಲೆಯಾಗಿರುವುದು ಕಂಡು ಬಂದಿರುವುದಾಗಿ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.ಅಲ್ಲದೆ ಉಪ ವಲಯ ಅರಣ್ಯಾಧಿಕಾರಿ ಅಕ್ರಮ ಮರಗಳ್ಳರೊಂದಿಗೆ ಶಾಮೀಲಾಗಿ ಕರ್ತವ್ಯದ ಅವಧಿಯಲ್ಲಿ ಮದ್ಯವ್ಯಸನಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೆ ಅತಿರೇಖದ ವರ್ತನೆ ತೋರಿದ್ದು ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆ ಇಡುತ್ತಿರುತ್ತಾರೆಂದು ಹಾಗೂ ಮಲ್ಲಿಪಟ್ಟಣ ಹೋಬಳಿ ವ್ಯಾಪ್ತಿಯ ಮುತ್ತಣ್ಣ ಹಾಗೂ ಅರುಣ ಎಂಬ ಮರಗಳ್ಳರೊಂದಿಗೆ ಶಾಮೀಲಾಗಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಸಿ ಮಾರಾಟ ಮಾಡುತ್ತಿರುತ್ತಾರೆ ಎಂದು ಸಹ ಅರಣ್ಯ ಸಹಾಯ ವಾಣಿ 1926 ಸಂಖ್ಯೆಗೆ ದೂರುಗಳು ಬಂದಿದ್ದವು. ಈ ಬಗ್ಗೆ ಸಮಜಾಯಿಷಿಕೆ ನೀಡುವಂತೆ ಉಪ ವಲಯ ಅರಣ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಿದ್ದರೂ ಸೂಕ್ತ ಸಮಜಾಯಿಷಿಕೆ ನೀಡದೆ ಹಾರಿಕೆಯ ಉತ್ತರವನ್ನು ನೀಡಿದ್ದರು. ಈ ಎಲ್ಲ ಲೋಪಗಳನ್ನು ಪರಿಗಣಿಸಿ ಡಿಆರ್‌ಎಫ್‌ಒ ರಘು ಅವರನ್ನು ಅಮಾನತುಗೊಳಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net