ಮರಗಳು ಧರೆಗುರುಳಿ ವಾಹನ ಸಂಚಾರಕ್ಕೆ ಅಡ್ಡಿ

Published on

ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಂಗಳವಾರವೂ ಧಾರಾಕಾರ ಮಳೆ ಸುರಿದು ಅಲ್ಲಲ್ಲಿ ಮರಗಳು ಧರೆಗುರುಳಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ಈ ಭಾಗದ ಹಲವೆಡೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ಹಾನಿಯಾದ ಹಿನ್ನೆಲೆಯಲ್ಲಿ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು.

ಸಮೀಪದ ಮಾದಾಪುರ ರಸ್ತೆಯ ಸ್ವಸ್ಥ ವಿಶೇಷ ಶಾಲೆಯ ಬಳಿ ಬೃಹತ್ ಮರ ಬಿದ್ದು ವಾಹನ ಹಾಗೂ ಜನಸಂಚಾರಕ್ಕೆ ಕೆಲಕಾಲ ಅಡ್ಡಿಯಾಗಿತ್ತು.

ಸಮೀಪದ ನಾಕೂರು ಶಿರಂಗಾಲ ಗ್ರಾಮದಲ್ಲೂ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ಜನರು ತೊಂದರೆ ಎದುರಿಸಬೇಕಾಯಿತು.

ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಕಡೆಗಳಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ನೆಲಕಚ್ಚಿದ ಪರಿಣಾಮ ಆ ಭಾಗದಲ್ಲಿ ಬೆಳಗ್ಗೆಯಿಂದಲೂ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ಸಮೀಪದ ಮಾದಾಪುರ-ಕುಂಬೂರು ಮಾರ್ಗಮಧ್ಯೆ ಅಲ್ಲಲ್ಲಿ ಮರಗಳು ಬಿದ್ದು ಬಹಳಷ್ಟು ತೊಂದರೆ ಅನುಭವಿಸುವಂತಾಯಿತು. ಸಮೀಪದ ಕೆದಕಲ್ ಗ್ರಾಮದ ಹೊರೂರು ಗ್ರಾಮದಲ್ಲಿ ಮರವೊಂದು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net