ಮರಗಳನ್ನು ಕಾಂಕ್ರೀಟ್ ಬಂಧಮುಕ್ತಗೊಳಿಸಿ ವಿನೂತನವಾಗಿ ವಿಶ್ವ ಭೂಮಿ ದಿನಾಚರಣೆ

mysore
Published on

ಮೈಸೂರು: ಮೈಸೂರಿನಲ್ಲಿ ಮರಗಳ ಬುಡಕ್ಕೆ ಕಾಂಕ್ರೀಟ್, ಡಾಂಬರ್ ಹಾಕಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸುತ್ತಿರುವುದನ್ನು ಖಂಡಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆ ಬದಿಯಲ್ಲಿರುವ ಮರಗಳನ್ನು ಬಂಧಮುಕ್ತಗೊಳಿಸಿ ವಿನೂತನವಾಗಿ ವಿಶ್ವ ಭೂಮಿ ದಿನ ಆಚರಿಸಲಾಯಿತು.

ಮರಗಳ ಬುಡಕ್ಕೆ ಸಿಮೆಂಟ್, ಕಾಂಕ್ರೀಟ್ ಬ್ಲಾಕ್ ಹಾಗೂ ಡಾಂಬರ್ ಹಾಕುವ ಮೂಲಕ ಬುಡಕ್ಕೆ ನೀರು ಹೋಗದ ಪರಿಸ್ಥಿತಿ ನಿರ್ಮಾಣ ಮಾಡಲಾಗಿತ್ತು. ಇದರಿಂದ ಮರಗಳಿಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗಿತ್ತು. ರೈತ ಮುಖಂಡರು ಇದನ್ನು ಖಂಡಿಸಿ ಮರಗಳಿಗೆ ಹಾಕಲಾಗಿದ್ದ ಸಿಮೆಂಟ್, ಕಾಂಕ್ರಿಟ್ ತೆರವುಗೊಳಿಸಿದರು.

ರೈತ ಮುಖಂಡ ಮಂಜು ಕಿರಣ್ ಮಾತನಾಡಿ, ಪಾಲಿಕೆ ಮರಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಮುಂದಿನ ದಿನಗಳಲ್ಲಿ ಗುತ್ತಿಗೆದಾರರಿಗೆ ಟೆಂಡರ್ ನೀಡುವಾಗಲೇ ಮರಗಳ ಸುತ್ತ ಎರಡರಿಂದ ಮೂರು ಅಡಿ ಜಾಗ ಬಿಟ್ಟು ಉಳಿದ ಜಾಗಕ್ಕೆ ಕಾಂಕ್ರೀಟ್ ಬ್ಲಾಕ್ ಹಾಕುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಮಳೆಗಾಲ ಶುರುವಾಗುತ್ತಿರುವುದರಿಂದ ಇನ್ನೂ 15 ದಿನಗಳ ಒಳಗಾಗಿ ಪಾಲಿಕೆ ಈ ಕೆಲಸ ಮಾಡಬೇಕು. ಇಲ್ಲದಿದ್ದರೆ ರೈತ ಸಂಘ ಸಿದ್ಧಾರ್ಥನಗರ ಬಡಾವಣೆಯಲ್ಲಿ ಪ್ರತಿ ಭಾನುವಾರ ಬೆಳಗ್ಗೆ 6.30 ರಿಂದ 8.30ರವರೆಗೆ ಅವೈಜ್ಞಾನಿಕವಾಗಿ ಮುಚ್ಚಿರುವ ಮರದ ಬುಡಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗುತ್ತದೆ ಎಂದು ಎಚ್ಚರಿಸಿದರು

ನಾಗರಿಕರು ತಮ್ಮ ಬೀದಿಗಳಲ್ಲಿ ಪ್ರತಿ ಭಾನುವಾರ ಎರಡು ಗಂಟೆ ಮರದ ಬುಡ ಬಿಡಿಸಿಕೊಳ್ಳುವ ಕೆಲಸ ಮಾಡಿದರೆ ಮೈಸೂರಿನ ನಗರದಲ್ಲಿ ಹಳೆಯ ಮರಗಳನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದರು.

ರೈತ ಸಂಘಟನೆಯ ಸಿದ್ದಲಿಂಗಪುರ ಮೋಹನ್‌ಕುಮಾರ್, ಗಳಿಗರಹುಂಡಿ ವೆಂಕಟೇಶ್, ಸಿದ್ದಲಿಂಗಪುರದ ಯುವಶಕ್ತಿ ಪಡೆಯ ಕಾರ್ತಿಕ್ ಕಿರಣ್, ಶಿವು ಮಾಲಿಂಗ, ಅಭಿಷೇಕ್, ಶಶಾಂಕ್, ನಾಗೇಂದ್ರ, ಹಿನಕಲ್ ಮೋಹನ್, ಪರಿಸರ ಪ್ರೇಮಿ ಬಳಗದ ಶೈಲಜೇಶ್, ಲೀಲಾ ಶಿವಕುಮಾರ್, ಕಾವೇರಮ್ಮ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net