ಮರಗಳ ಹನನ: ಕಾಲೇಜು ಆಡಳಿತ ಮಂಡಳಿ ವಿರುದ್ಧವೇ ವಿದ್ಯಾರ್ಥಿಗಳ ಪ್ರತಿಭಟನೆ

9 (1)
Published on

ಮೈಸೂರು: ವಿಜಯನಗರದ ಶ್ರೀಕಲಾನಿಕೇತನ ದೃಶ್ಯಕಲಾ ಕಾಲೇಜಿನ ಆವರಣದಲ್ಲಿದ್ದ ಮರಗಳನ್ನು ಆಡಳಿತ ಮಂಡಳಿಯೇ ಕತ್ತರಿಸಿದೆ. ಇದರಿಂದ ಅಸಮಾಧಾನಗೊಂಡ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.


ಕಾಲೇಜಿನ ಆವರಣದಲ್ಲೇ ವಿದ್ಯಾರ್ಥಿಗಳು ಧರಣಿ ನಡೆಸಿ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು. ಪ್ರತಿಭಟನೆಗೆ ಬೋಧಕರು, ಸಿಬ್ಬಂದಿ ಸಹ ಸಾಥ್ ನೀಡಿದರು.


ಕಾಲೇಜಿನ ಕಟ್ಟಡ ಹಿಂಭಾಗದಲ್ಲಿ ಹಲಸಿನ ಮರಗಳನ್ನು ವಿದ್ಯಾರ್ಥಿಗಳು, ಬೋಧಕರು, ಸಿಬ್ಬಂದಿ ಸೇರಿ ಬೆಳೆಸಿದ್ದರು. ಆರೇಳು ವರ್ಷದಿಂದ ಬೆಳೆಸಿದ್ದ ಇವುಗಳು ಫಲವನ್ನು ಸಹ ನೀಡುತ್ತಿದ್ದವು. ಜತೆಗೆ, ಈ ಹಸರೀಕರಣದಿಂದ ಕಾಲೇಜಿನ ಸೌಂದರ್ಯವನ್ನು ವೃದ್ಧಿಸಿತ್ತು. ಪಕ್ಷಿಗಳ ಕಲವರ ಮತ್ತು ತಂಪು

ವಾತಾವರಣದೊಂದಿಗೆ ಉತ್ತರ ಪರಿಸರ ನಿರ್ಮಾಣವಾಗಿತ್ತು. ಇದರೊಂದಿಗೆ ವಿದ್ಯಾರ್ಥಿಗಳು ಭಾವನಾತ್ಮಕ ಸಂಬಂಧವನ್ನೂ ಬೆಳೆಸಿಕೊಂಡಿದ್ದರು. ಆದರೆ, ಯಾರಿಗೂ ಗೊತ್ತಾಗದಂತೆ ಮರಗಳನ್ನು ಬೃಹತ್ ಯಂತ್ರಗಳ ಸಹಾಯದಿಂದ ಕಡಿಯಲಾಗಿದೆ ಎಂದು ವಿದ್ಯಾರ್ಥಿಗಳು ಕಿಡಿಕಾರಿದರು.
ಮರಗಳ ಅಡಿಯಲ್ಲಿ ಕುಳಿತು ವಿದ್ಯಾರ್ಥಿಗಳು ಚಿತ್ರ ಬಿಡಿಸುತ್ತಿದ್ದರು. ಇದು ಚಿತ್ರಕಲೆ ರಚನೆಗೆ ಬಹಳ ಪೂರಕವಾಗಿತ್ತು. ಇಂತಹವೊಂದು ಕಲಾತ್ಮಕ ವಾತಾವರಣವನ್ನು ಹಾಳು ಮಾಡಲಾಗಿದೆ ಎಂದು ದೂರಿದರು.


ಮುಡಾದಿಂದ ಹಂಚಿಕೆಯಾಗಿರುವ ಸಿಎ ನಿವೇಶನದಲ್ಲಿ ಕಾಲೇಜಿನ ಕಟ್ಟಡವನ್ನು ನಿರ್ಮಿಸಲಾಗಿದೆ. ಇದು ಸಾರ್ವಜನಿಕ ಜಾಗವಾಗಿದೆ. ಆಡಳಿತ ಮಂಡಳಿಯ ಸ್ವಂತ ಜಾಗವಲ್ಲ. ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆದುಕೊಂಡಿಲ್ಲ ಎಂದು ಆರೋಪಿಸಿದರು.


ವಿದ್ಯಾರ್ಥಿಗಳಾದ ಸಂದಯ್ಯ ಕುಮಾರ್, ಮಂಜು, ನಂದನ್, ಸೌಮ್ಯಾ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net