

ಕಿಕ್ಕೇರಿ: ಇಲ್ಲಿನ ಎಪಿಎಂಸಿ ಮಾರುಕಟ್ಟೆ ಬಳಿ ಸೋಮವಾರ ವ್ಯಾನ್ ಮೇಲೆ ಬೃಹತ್ ಮರ ಬಿದ್ದು ಒಮ್ನಿ ವ್ಯಾನ್ ಜಖಂಗೊಂಡಿದೆ.
ಭಾನುವಾರ ತಡರಾತ್ರಿಯಿಂದ ಬಿಡದೆ ಸುರಿದ ಮಳೆಯಿಂದ ಭೂಮಿ ಸಂಪೂರ್ಣ ಶೀತಗೊಂಡಿತ್ತು. ಇದರಿಂದ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಬುಡಮೇಲಾಗಿ ಕೆ.ಆರ್.ಪೇಟೆ ಮಾರ್ಗವಾಗಿ ಬರುತ್ತಿದ್ದ ವ್ಯಾನ್ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಮೀದಲ್ಲಿದ್ದ ಟೀ ಅಂಗಡಿಗೆ ಯಾವುದೇ ಹಾನಿಯಾಗಿಲ್ಲ. ಮರದ ಬಳಿ ನಿಲ್ಲಿಸಲಾಗಿದ್ದ ಒಂದು ಬೈಕ್ ಜಖಂಗೊಂಡಿದೆ.
ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಮಚಾರಕ್ಕೆ ಕೆಲಕಾಲ ಅಡಚಣೆಯಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.