ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ

26sor6 (1)
ಸೊರಬ-ಸಾಗರ ರಸ್ತೆಯ ಗುಂಡಪ್ಪನ ತೆಗ್ಗಿನಲ್ಲಿ ಮರ ಉರುಳಿ ವಿದ್ಯುತ್ ಕಂಬಗಳು ತುಂಡಾಗಿರುವುದು.
Published on

ಸೊರಬ: ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಬುಧವಾರ ರಾತ್ರಿ ಸುರಿದ ಗಾಳಿ ಮಳೆಗೆ ಸೊರಬ- ಸಾಗರ ರಸ್ತೆಯಲ್ಲಿ ಮರಗಳು ಧರೆಗೆ ಉರಳಿ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು ಕೆಲ ಕಾಲ ಸಂಚಾರ ಸ್ಥಗಿತವಾಗಿತ್ತು.

ಸೊರಬ- ಸಾಗರ ರಸ್ತೆಯ ಗುಂಡಪ್ಪನ ತೆಗ್ಗು ಹಾಗೂ ಹಾಲಗಳಲೆ ಕ್ರಾಸ್ ಬಳಿ ಮರಗಳು ಧರೆಗೆ ಉರಳಿ 5 ವಿದ್ಯುತ್ ಕಂಬಗಳು ತುಂಡಾಗಿದ್ದು, ಎರಡು ವಾಲಿಕೊಂಡಿವೆ. ಇದರಿಂದ ಸಾಗರ ಮತ್ತು ಸೊರಬ ಮಾರ್ಗದಲ್ಲಿ ಸಂಚಾರ ಸ್ಥಗಿತವಾಗಿತ್ತು. ಕಪ್ಪಗಳಲೆ ಗ್ರಾಮಸ್ಥರು ಉರುಳಿದ ಮರವನ್ನು ಕತ್ತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸೊರಬ- ಸಾಗರ ರಸ್ತೆಯಲ್ಲಿ ಅತ್ಯಂತ ಹಳೆಯ ಹಾಗೂ ರಸ್ತೆಗೆ ಬಾಗಿರುವ ಹತ್ತಾರು ಮರಗಳಿವೆ. ಗುಂಡಪ್ಪನ ತೆಗ್ಗು 16ನೇ ಮೈಲಿಕಲ್ಲು, ಸಪ್ಪಿನಮಲ್ಲಮ್ಮನ ಏರಿ, ಹಾಲಗಳಲೆ, ಮುದಿಕಿ ತಗ್ಗು, ಹಾಲಗಳಲೆ ಕ್ರಾಸ್, ಬುರುಡೆ ಗಟ್ಟೆ ಏರಿ, ಕುಪ್ಪೆ ಅವಲಗೋಡು ಬಳಿ ರಸ್ತೆ ಉದ್ದಕ್ಕೂ ಬೀಳುವ ಸಾಧ್ಯತೆ ಇರುವ ಮರಗಳಿವೆ. ಈಗಾಗಲೆ ಹೊಳೆಕೊಪ್ಪ ಹಾಲಗಳೆ ಗುಂಡಪ್ಪನ ತಗ್ಗುವಿನಲ್ಲಿ ಮೂರ‌್ನಾಲ್ಕು ಮರಗಳು ಬಿದ್ದಿವೆ.

ತಾಲೂಕಿನಲ್ಲಿ ಬುಧವಾರ ಬೆಳಗ್ಗೆಯಿಂದ ಗುರುವಾರ ಬೆಳಗಿನವರಗೆ 24.8 ಮಿ.ಮೀ ಮಳೆಯಾಗಿರುವ ವರದಿಯಾಗಿದೆ. ನಲ್ಲೂರು ಗ್ರಾಮದಲ್ಲಿ 108 ಮಿ.ಮೀ, ಜಡೆ 51.4, ಬೆನ್ನೂರು 55, ಕುಪ್ಪಗಡ್ಡೆ 30, ಉಳವಿ 43.8, ಕುಪ್ಪೆ 47..9 ಮಿ.ಮೀ ಬಿದ್ದಿರುವ ಬಗ್ಗೆ ವರದಿಯಾಗಿದೆ. ಗುರುವಾರ ಕೂಡ ಮಧ್ಯಾಹದ ನಂತರ ಮಳೆ, ಗಾಳಿ ಜೋರಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net