

ಮೈಸೂರು: ನಗರದ ಹೈದರಲಿ ರಸ್ತೆ ಅಗಲೀಕರಣಕ್ಕಾಗಿ ತೆರವು ಮಾಡಿರುವ 40 ಮರಗಳಿಗೆ ಸಾವಿರಾರು ಜನರು ಶುಕ್ರವಾರ ಸಂಜೆ ಮೌನ ಪ್ರತಿಭಟನೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಿದರು.
ಮೇಣದ ಬತ್ತಿ ಹಿಡಿದು, ಕಪ್ಪು ಪಟ್ಟಿ ಧರಿಸಿ ಹೈದರಲಿ ರಸ್ತೆಯ ಎರಡೂ ಬದಿಗಳಲ್ಲಿ ನಿಂತು, ಮರದ ಬುಡಗಳಿಗೆ ಪೂಜೆ ಸಲ್ಲಿಸಿ ಹನನಗೊಂಡ ಮರಗಳಿಗೆ ಅನುಕಂಪ ವ್ಯಕ್ತಪಡಿಸಿದರು. ಸಂಜೆ 7ರಿಂದ 7.15ರವರೆಗೆ ಮೇಣದ ಬತ್ತಿ ಹಿಡಿದು ಪ್ರತಿಭಟನಾಕಾರರು, ಬಳಿಕ ರಸ್ತೆ ಮಧ್ಯದಲ್ಲಿ ಕುಳಿತುಕೊಂಡರು. ಕಾಳಿಕಾಂಬ ದೇವಸ್ಥಾನದಿಂದ ಎಸ್‌ಪಿ ಕಚೇರಿ ವೃತ್ತದವರೆಗೆ ಮೌನ ಪ್ರತಿಭಟನಾ ರ‌್ಯಾಲಿ ನಡೆಸಿದರು.
ಯಾವುದೇ ಘೋಷಣೆ ಇಲ್ಲದೇ ಯಾರ ವಿರುದ್ಧ ಆಕ್ರೊಶ ವ್ಯಕ್ತಪಡಿಸದೇ ಮಕ್ಕಳು, ಮಹಿಳೆಯರು, ವಿವಿಧ ಧರ್ಮಗಳ ಜನರು, ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟಿಸಿದರು. ಜತೆಗೆ, ಮರಗಳನ್ನು ಕಟಾವು ಮಾಡಿರುವ ಕ್ರಮದ ವಿರುದ್ಧ ಮೌನವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು.
ಮರಗಳಿಗೆ ನ್ಯಾಯ ಕಲ್ಪಿಸಬೇಕು, ಮೈಸೂರಿಗೆ ಬೇಕಿರುವುದು ಇನ್ನಷ್ಟು ಹಸಿರು, ಅಗಲವಾದ ರಸ್ತೆಗಳಲ್ಲ ಎಂಬಿತ್ಯಾದಿ ಭಿತ್ತಿಪತ್ರ ಹಿಡಿದು ಪ್ರತಿಭಟನಾಕಾರರರು ಅಸಮಾಧಾನ ತೋರ್ಪಡಿಸಿದರು.
ಮೈಸೂರು ಗ್ರಾಹಕರ ಪರಿಷತ್, ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ, ಮೈಸೂರು ಸೈಕ್ಲಿಂಗ್ ಟೀಂ, ಮೈಸೂರು ಅಥ್ಲೆಟಿಕ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ನಿವೃತ್ತ ಮೇಜರ್ ಜನರಲ್ ಒಂಬತ್ಕೆರೆ, ಪರಿಸರ ಬಳಗದ ಪರಶುರಾಮೇಗೌಡ, ಲೀಲಾ ಶಿವಕುಮಾರ್, ಪ್ರೊ.ಎನ್.ಎಸ್ ರಂಗರಾಜು, ಪ್ರೊ.ಕಾಳಚನ್ನೇಗೌಡ, ಉಗ್ರನರಸಿಂಹೇಗೌಡ, ಪ್ರೊ.ರತಿರಾವ್, ಬಿ.ಎಸ್.ಪ್ರಶಾಂತ್, ಜಿಎಸ್‌ಎಸ್ ಶ್ರೀಹರಿ, ವಕೀಲ ಅರುಣ್‌ಕುಮಾರ್, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ ಭೂಮಿಪುತ್ರ ಸಿ. ಚಂದನ್‌ಗೌಡ, ಒಡನಾಡಿ ಪರಶು, ಪ್ರೊ.ಎನ್.ಶ್ರೀದೇವಿ, ಪ್ರೊ.ವಿಜಯಲಕ್ಷ್ಮೀ, ಡಾ.ನಿಂಗರಾಜು ಇನ್ನಿತರರಿದ್ದರು
ಮೌನ ಪ್ರತಿಭಟನೆಯಲ್ಲಿ ಮೆರವಣಿಗೆ ನಡೆಸಿದ ಶಾಸಕ ಟಿ.ಎಸ್.ಶ್ರೀವತ್ಸ ವಿರುದ್ಧ ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀವತ್ಸ ಅವರು ಸುದ್ದಿಗಾರರೊಂದಿಗೆ ಮಾತಾಡುವ ವೇಳೆ, ಪರಿಸರ ಬಳಗದ ಪರಶುರಾಮೇಗೌಡ ಅವರು ಮೌನವಾಗಿರುವಂತೆ ಹೇಳಿದರು. ಇದಕ್ಕೆ ಕೆರಳಿದ ಶಾಸಕರ ಬೆಂಬಲಿಗರು, ‘ನಾವು ಮೈಸೂರಿಗಾಗಿ ಇಲ್ಲಿಗೆ ಬಂದಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.
ಬಳಿಕ ಎಲ್ಲರೂ ಮೌನ ಪ್ರತಿಭಟನೆ ಮಾಡುವಾಗ ಟಿ.ಎಸ್.ಶ್ರೀವತ್ಸ ಮತ್ತವರ ಬೆಂಬಲಿಗರು ಮೆರವಣಿಗೆ ನಡೆಸಿದರು. ಈ ವೇಳೆ ಹೋರಾಟಗಾರ ಮಹಿಳೆಯರು ‘ರಾಜಕೀಯ ಬೆರಸಬೇಡಿ. ಒಂದು ವಾರದಿಂದ ಕಷ್ಟಪಟ್ಟಿದ್ದೇವೆ. ಹೋರಾಟದಲ್ಲಿ ಗೊಂದಲ ಮೂಡಿಸಬೇಡಿ’ ಎಂದು ಹೇಳಿದರು.
ಮರ ಕಟಾವು ಮಾಡಿದವರ ವಿರುದ್ಧ ಎಫ್‌ಐಆರ್ ಈಗಾಗಲೇ ದಾಖಲಾಗಿದೆ. ಆದರೆ, ಈವರೆಗೆ ಯಾರನ್ನೂ ಬಂಧಿಸಿಲ್ಲ. ಕೂಡಲೇ ಮರ ಕಡಿದವರ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಆಗ್ರಹಿಸಿದರು.
ರಸ್ತೆ ಅಗಲೀಕರಣಕ್ಕಾಗಿ 40 ಮರಗಳನ್ನು ಹನನ ಮಾಡಿರುವುದು ಸರಿಯೇ ಎಂಬ ಪ್ರಶ್ನೆ ಪ್ರತಿಭಟನೆ ವೇಳೆ ಮಾರ್ದನಿಸಿತು.
ನಜರ್‌ಬಾದ್‌ನ ಹೈದರಲಿ ರಸ್ತೆಯಲ್ಲಿದ್ದ 5 ದಶಕಗಳ ಮರಗಳನ್ನು ಶನಿವಾರ ರಾತ್ರೋರಾತ್ರಿ ಕಡಿದು ಹಾಕಲಾಗಿದೆ.
ಎಸ್‌ಪಿ ಕಚೇರಿಯ ವೃತ್ತದಿಂದ ಕಾಳಿಕಾಂಬ ದೇಗುಲದವರೆಗಿನ ರಸ್ತೆಯನ್ನು 30 ಮೀಟರ್ ವಿಸ್ತರಣೆ ಮಾಡಲು ಪಾಲಿಕೆ ಮುಂದಾಗಿದೆ. ಅದಕ್ಕಾಗಿ ಈ ಮರಗಳನ್ನು ಬಲಿ ಕೊಡಲಾಗಿದೆ. ಈ ರಸ್ತೆ ವಿಸ್ತಾರವಾಗಿದೆ. ವಿಶಾಲವಾದ ಪಾದಚಾರಿ ಮಾರ್ಗಯನ್ನೂ ಹೊಂದಿದೆ. ಜತೆಗೆ, ಈ ರಸ್ತೆಯಲ್ಲಿ ಬಸ್‌ಗಳ ಓಡಾಟ, ಬೃಹತ್ ವಾಹನಗಳ ಸಂಚಾರ ಕಡಿಮೆ ಇದೆ. ಹೆಚ್ಚು ವಾಹನಗಳ ದಟ್ಟಣೆ ಏನೂ ಇರುತ್ತಿರಲಿಲ್ಲ.
ಆದಾಗ್ಯೂ, ಈ ರಸ್ತೆ ಅಗಲೀಕರಣದ ಅಗತ್ಯ ಏನು ಇತ್ತು? ಅದಕ್ಕಾಗಿ ಮರಗಳನ್ನು ಕಡಿಯುವ ಅವಶ್ಯಕತೆ ಏನು ಇತ್ತು? ಎಂಬ ಪ್ರತಿಭಟನಾಕಾರರು ಪ್ರಶ್ನಿಸಿದರು.
ಸಾಮಾಜಿಕ ಮಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ತೆರವುಗೊಳಿಸಲು ಎಲ್ಲ ಮರಗಳಿಗೂ ಯಾವುದೇ ಅನುಮತಿ ನೀಡಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜು ತಿಳಿಸಿದ್ದಾರೆ.
ಮೈಸೂರು ನಗರದ ಹಾಗೂ ಹೊರಭಾಗದಲ್ಲಿ ಹಲವೆಡೆ ರಸ್ತೆ ಬದಿ ಮರಗಳನ್ನು ಗುರುತಿಸಿರುವ ಬಗ್ಗೆ ಅರಣ್ಯ ಇಲಾಖೆಯಿಂದ ಮರ ತೆರವುಗೊಳಿಸಲು ಅನುಮತಿ ನೀಡಿರುವುದಾಗಿ ತಪ್ಪಾಗಿ ವರದಿಯಾಗುತ್ತಿದೆ.
ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆಯಡಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಮರ ಅಥವಾ ಕೊಂಬೆಗಳನ್ನು ತೆರವುಗೊಳಿಸುವ ಅವಶ್ಯಕತೆ ಇರುವ ಬಗ್ಗೆ ಸಂಬಂಧಿಸಿದ ಇಲಾಖೆಯು ವಿಸ್ತೃತ ಕಾರ್ಯ ವರದಿ (ಡಿಪಿಆರ್) ನೀಡಬೇಕು. ಅದರ ಪ್ರಕಾರ ಮರ ಅಥವಾ ಕೊಂಬೆಗಳನ್ನು ಗುರುತಿಸುತ್ತವೆ. ನಂತರ ಅರಣ್ಯ ಇಲಾಖೆಗೆ ಪರಿಶೀಲನೆ ಅನುಮತಿಗಾಗಿ ಅರ್ಜಿ ಸಲ್ಲಿಸುತ್ತವೆ. ಒಂದು ವೇಳೆ ಮರಗಳ ಸಂಖ್ಯೆ 50ಕ್ಕಿಂತ ಹೆಚ್ಚಾದಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆಯನ್ನು ಪಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಮರಗಳ ಹನನ ಹೇಯ ಕೃತ್ಯವಾಗಿದೆ. ಮರಗಳ ಆಶ್ರಯವಿಲ್ಲದ ಕಾರಣಕ್ಕೆ ಪಕ್ಷಿಗಳ ಹಾಹಾಕಾರ ಮನಸ್ಸಿಗೆ ನೋವು ಉಂಟು ಮಾಡುತ್ತಿದೆ. ಪರಿಸರ ನಾಶದಿಂದ ವಿವಿಧ ರೋಗಗಳಿಗೆ ತುತ್ತಾಗಿದ್ದೇವೆ. ಈ ಭೂಮಿ ಮುಂದಿನ ಪೀಳಿಗೆಗೆ ಉಳಿಯಬಾರದೇ? ದೀಪಕ್ ಪುಟ್ಟಸ್ವಾಮಿ, ನಜರ್‌ಬಾದ್ ನಿವಾಸಿ ಕೋಟ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಂಪಾದ ವಾತಾವರಣ ಇದೆ. ಆದರೆ, ಅಧಿಕಾರಿಗಳು ಇದನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮರಗಳ ಹನನಕ್ಕೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಮಂಜು, ಸುಬೇದಾರ್