ಹನೂರು: ತಾಲೂಕಿನ ಕಣ್ಣೂರು ಗ್ರಾಮದಲ್ಲಿ ಶನಿವಾರ ಮರ ಕಡಿಯುವ ವೇಳೆ ವಿದ್ಯುತ್ ಕಂಬ ಬಿದ್ದು ಕಾರೊಂದು ಜಖಂಗೊಂಡಿದೆ.
ಗ್ರಾಮದ ಮುಖ್ಯರಸ್ತೆಯ ಬದಿಯಲ್ಲಿರುವ ನಿಂಗರಾಜು ಎಂಬುವರ ಜಾಗದಲ್ಲಿ ಮಧ್ಯಾಹ್ನ 1.30ರಲ್ಲಿ ಸ್ಥಳೀಯರು ಮರವೊಂದನ್ನು ಕಡಿಯುತ್ತಿದ್ದರು. ಮರ ತುಂಡಾಗಿ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ 3 ವಿದ್ಯುತ್ ಕಂಬಗಳು ನೆಲಕ್ಕುರಳಿದ್ದು, ಇದರಲ್ಲಿ ಒಂದು ಕಂಬ ಮಂಗಲ ಗ್ರಾಮದ ರಮೇಶ್ ಎಂಬುವರ ಕಾರಿನ ಮೇಲೆ ಬಿದ್ದು ಜಖಂಗೊಂಡಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಸಿಬ್ಬಂದಿ ವಿದ್ಯುತ್ ಕಂಬವನ್ನು ತೆರವುಗೊಳಿಸಿದರು. ಜಖಂಗೊಂಡಿದ್ದ ಕಾರಿನ ಬಗ್ಗೆ ಸ್ಥಳೀಯವಾಗಿಯೇ ಸಮಸ್ಯೆ ಬಗೆಹರಿಸಲಾಯಿತು. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಕಣ್ಣೂರು, ಆನಾಪುರ, ಮಂಗಲ ಹಾಗೂ ಈ ಮಾರ್ಗದ ಇನ್ನಿತರ ಗ್ರಾಮದ ಜನರು ರಾತ್ರಿ 9.30 ವರೆಗೂ ತೊಂದರೆ ಅನುಭವಿಸಿದರು.